ಬೆಂಗಳೂರು: ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಐಡಿ ಬುಧವಾರ ಬೆಂಗಳೂರು ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳ 51 ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ದಾಳಿ ವೇಳೆ 38 ಮಂದಿ ಅಕ್ರಮವಾಗಿ ನೇಮಕವಾಗಿದ್ದ ಶಿಕ್ಷಕರನ್ನು ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ಇದುವರೆಗೂ 60 ಮಂದಿ ಶಿಕ್ಷಕರು ಹಾಗೂ ನಿರ್ದೇಶಕರನ್ನು ಬಂಧಿಸಿದಂತಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ 24, ಬೆಂಗಳೂರು ದಕ್ಷಿಣ ಜಿಲ್ಲೆಯ 5, ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು, ಚಿತ್ರದುರ್ಗ ಜಿಲ್ಲೆಯಲ್ಲಿ 5 ಶಿಕ್ಷಕರನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಿಐಡಿ ತಿಳಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ 2012-13 ಹಾಗೂ 2014-15ರಲ್ಲಿ ನಡೆಸಿದ ಸಹ ಶಿಕ್ಷಕರ ನೇಮಕಾತಿಯಲ್ಲಿ ನೂರಾರು ಮಂದಿ ಅಕ್ರಮವಾಗಿ ನೇಮಕಗೊಂಡಿದ್ದಾರೆ. ಅಲ್ಲದೆ, ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಮತ್ತು ಹಲಸೂರು ಗೇಟ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿರುವುದರಿಂದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಅಕ್ರಮವಾಗಿ ನೇಮಕಗೊಂಡು ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹ-ಶಿಕ್ಷಕರು ಮತ್ತು ಅವರಿಗೆ ಸಹಾಯ ನೀಡಿದ ಆರೋಪದ ಮೇಲೆ ನಿರ್ದೇಶಕರು ಸೇರಿ 22 ಮಂದಿಯನ್ನು ಬಂಧಿಸಿದ್ದರು. ಈ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಇನ್ನಷ್ಟು ಮಂದಿ ಶಿಕ್ಷಕರು ಅಕ್ರಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಹೀಗಾಗಿ ಆರೋಪಿಗಳ ಪತ್ತೆಗಾಗಿ 18 ಮಂದಿ ಡಿವೈಎಸ್ಪಿ ಹಾಗೂ 14 ಮಂದಿ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ 30 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಬುಧವಾರ ಬೆಂಗಳೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದಾಳಿ ನಡೆಸಿವೆ.
ಡಿಡಿಪಿಐ ಹಾಗೂ ಜಂಟಿ ನಿರ್ದೇಶಕರ ಸಹಕಾರ: ಎರಡು ಅವಧಿಯಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮವಾಗಿ ನೂರಾರು ಮಂದಿ ಶಿಕ್ಷಕರು ನೇಮಕಗೊಂಡಿದ್ದರು. ಆದರೆ, ಅವರಿಗೆ ಜಿಲ್ಲಾ ಡಿಡಿಪಿಐ ಹಾಗೂ ಜಂಟಿ ನಿರ್ದೇಶಕರು ಅಕ್ರಮ ಶಿಕ್ಷಕರಿಗೆ ಸಹಾಯ ಮಾಡಿದ್ದರು. ಅಲ್ಲದೆ, ಸಿಐಡಿ ತನಿಖೆ ವೇಳೆ, ಡಿಡಿಪಿಐ ಹಾಗೂ ಜಂಟಿ ನಿರ್ದೇಶಕರು ಪ್ರತಿ ಶಿಕ್ಷಕನಿಂದ 20 ರಿಂದ 25 ಲಕ್ಷ ರೂ. ಪಡೆದುಕೊಂಡು ನೇಮಕಾತಿ ಪ್ರತಿ ನೀಡಿದ್ದಾರೆ ಎಂಬುದು ಪತ್ತೆಯಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ: ಪಠ್ಯಪುಸ್ತಕ ನಿರ್ದೇಶಕ ಸೇರಿ ಐವರ ಬಂಧನ