ಬೆಂಗಳೂರು: ಅಭಿವೃದ್ಧಿ ವರ್ಗಾವಣೆ ಹಕ್ಕು (ಟಿಡಿಆರ್) ಹಗರಣದಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಕೈ ಜೋಡಿಸಿದ್ದಾರೆ ಎಂಬ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಿಬಿಎಂಪಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.
ನಗರದ ಚೋಳರಪಾಳ್ಯ ವಾರ್ಡ್ನ ಕಾರ್ಯಪಾಲಕ ನಾಗರಾಜು, ಹೊರಮಾವು ಉಪವಲಯದ ಎಆರ್ಐಒ ಎಸ್.ನಂದನ, ಕಲ್ಯಾಣ ನಗರದ ಬಿಬಿಎಂಪಿ ಅಧಿಕಾರಿ ಎಂ.ಕೆ. ರೋಚನ್ ಮನೆ, ಹೊರಮಾವಿನಲ್ಲಿರುವ ಗುಡ್ ಹೋಂ ವೆಂಚರ್ಸ್ ಕಚೇರಿ, ವಿ. ಗಜೇಂದ್ರ, ಕಲ್ಕೆರೆ ಮುಖ್ಯರಸ್ತೆಯ ಜಿ.ವಿ. ಕನ್ಸ್ಟ್ರಕ್ಷನ್, ಸರ್ಜಾಪುರ ರಸ್ತೆಯ ಗೋಪಿ ಎಂಬುವರ ಮನೆ ಹಾಗೂ ಅಕ್ಷಯ ನಗರದ ಆನೆಮ್ಮ ಎಂಬುವರ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ.
ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ನಿವೇಶನಗಳು ಹಾಗೂ ಕಟ್ಟಡಗಳನ್ನು ಹೆಚ್ಚು ಬೆಲೆ ನಿಗದಿ ಮಾಡಿಕೊಡುವ ಮೂಲಕ ಖಾಸಗಿ ವ್ಯಕ್ತಿಗಳಿಗೆ ಕೋಟ್ಯಂತರ ರೂ. ಲಾಭ ಮಾಡಿಕೊಡಲು ಸಹಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪೂರ್ವಾನುಮತಿ ಪಡೆದು ಎಸಿಬಿ ಪ್ರಕರಣ ದಾಖಲಿಸಿತ್ತು. ಇದೀಗ ನ್ಯಾಯಾಲಯದ ಅನುಮತಿ ಪಡೆದು ದಾಳಿ ನಡೆಸಿದೆ.
ಹೊರಮಾವಿನ ಟಿಸಿ ಪಾಳ್ಯ ಮುಖ್ಯರಸ್ತೆ ಹಾಗೂ ವಾರಣಾಸಿ ರಸ್ತೆ ಅಗಲೀಕರಣಕ್ಕೆ ಸರ್ವೆ ನಂ7ರ ಜಮೀನಿನಲ್ಲಿ ಅಂದಾಜು 6,886 ಚದರ್ ಅಡಿ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಅಧಿಕಾರಿಗಳು ಅಕ್ರಮವಾಗಿ ಸುಮಾರು 1,57,961 ಚದರ್ ಅಡಿ ಬೋಗಸ್ ಟಿಡಿಆರ್ ಸೃಷ್ಟಿಸಿ ಅನ್ಯ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದರು.