ಬೆಂಗಳೂರು: ರಾಜ್ಯದ 868 ಹಿಂದುಯೇತರ ಧಾರ್ಮಿಕ ಕೇಂದ್ರಗಳಿಗೆ ನೀಡಬೇಕಾಗಿದ್ದ 'ತಸ್ತೀಕ್' ಹಾಗೂ ವರ್ಷಾಸನವನ್ನು ಧಾರ್ಮಿಕ ದತ್ತಿ ಇಲಾಖೆ ಕಳೆದ ನಾಲ್ಕು ತಿಂಗಳಿಂದ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ತಸ್ತೀಕ್‌ಗೆ ಕಡಿವಾಣ ಬಿದ್ದಿದ್ದು 2020- 21 ನೇ ಸಾಲಿನಲ್ಲಿ ಒಟ್ಟು 4,17,31,473 ಕೋಟಿ ತಸ್ತೀಕ್ ಹಣ ಈವರೆಗೂ ಪಾವತಿ ಆಗಿಲ್ಲ. ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಹಿಂದುಯೇತರ ಧಾರ್ಮಿಕ ಕೇಂದ್ರಗಳಿಗೆ ಪ್ರತಿ ತಿಂಗಳಿಗೆ ನಾಲ್ಕು ಸಾವಿರದಂತೆ ವರ್ಷಕ್ಕೆ 48,000 ರೂಪಾಯಿ ತಸ್ತಿಕ್ ನೀಡಲಾಗುತಿತ್ತು.
ಹಿಂದುಯೇತರ 868 ಧಾರ್ಮಿಕ ಕೇಂದ್ರಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯ ಮೂಲಕ ತಸ್ತೀಕ್ ಮತ್ತು ವರ್ಷಾಸನ ನೀಡಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶಿಸಿದೆ. ಆದರೆ ಅನುದಾನದ ಮೊತ್ತ ಈವರೆಗೆ ಬಿಡುಗಡೆ ಆಗಿಲ್ಲ.
ಈ ಬಗ್ಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ರಸೂಲ್ ಸಾಬ್, ಧಾರ್ಮಿಕ ಕೇಂದ್ರಗಳಿಗೆ ತಸ್ತೀಕ್ ನೀಡುವಂತೆ ಕಳೆದ ಹಲವು ದಿನಗಳಿಂದ ಅಲೆದಾಡುತ್ತಿದ್ದೇವೆ. ಲಾಕ್‌ಡೌನ್ ಕಾರಣದಿಂದ ಧಾರ್ಮಿಕ ಕೇಂದ್ರಗಳು ಸಂಕಷ್ಟದಲ್ಲಿವೆ. ಆದರೆ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಈ ಬಗ್ಗೆ ಕೇಳಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ವಿಚಾರಿಸಿದರೆ, ಅಷ್ಟೊಂದು ಮೊತ್ತದ ಅನುದಾನ ನಮ್ಮಲ್ಲಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಉತ್ತರಿಸುತ್ತಾರೆ ಎಂದು ಹೇಳಿದರು.