ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಯೋಜಿಸಿದ್ದ ಭೋಜನ ಕೂಟಕ್ಕೆ ಆಗಮಿಸಿ ಮಾಜಿ ಸಚಿವ ತನ್ವೀರ್ ಸೇಠ್ ಅಚ್ಚರಿ ಮೂಡಿಸಿದ್ದಾರೆ.
ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸದಲ್ಲಿ ಭೋಜನ ಕೂಟ ಆಯೋಜಿಸಿದ್ದ ಸಿದ್ದರಾಮಯ್ಯ, ಪಕ್ಷದ ಎಲ್ಲಾ ಶಾಸಕರನ್ನು ಆಹ್ವಾನಿಸಿದ್ದರು. ಎಲ್ಲರೂ ಆಗಮಿಸಿದರಾದರೂ ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ತನ್ವೀರ್ ಸೇಠ್ ಆಗಮಿಸುವುದಿಲ್ಲ ಎಂದು ಭಾವಿಸಲಾಗಿತ್ತು.
ಆದರೆ ಭೋಜನ ಮುಗಿಸಿ ಲಾನ್ನಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಮತ್ತು ಉಳಿದ ಶಾಸಕರು ತನ್ವಿರ್ ಸೇಠ್ ಆಗಮನವನ್ನು ಅಚ್ಚರಿಯಿಂದ ಸ್ವೀಕರಿಸಿ, ಆತ್ಮೀಯವಾಗಿ ಬರಮಾಡಿಕೊಂಡರು.
ಭೋಜನಾ ಕೂಟಕ್ಕೆ ಆಗಮಿಸಿದ ಸೇಠ್, ಸಿದ್ದರಾಮಯ್ಯಗೆ ಕೈಮುಗಿದು ಅವರ ಜೊತೆಯಲ್ಲಿ ಕುಳಿತು ಮಾತನಾಡುತ್ತಿದ್ದ ಸಿ.ಎಂ.ಇಬ್ರಾಹಿಂ ಹಾಗೂ ರಮೇಶ್ ಕುಮಾರ್ಗೆ ಹಸ್ತಲಾಘವ ನೀಡಿ ಊಟಕ್ಕೆ ತೆರಳಿದರು.
ಓದಿ: ಸಿಡಿ ಮಾಡೋರು, ಹಂಚೋರು ಎಲ್ಲವೂ ಗೊತ್ತಿದೆ: ಯತ್ನಾಳ್
'ಬಾರಯ್ಯ' ಎಂದು ಕರೆದ ಸಿದ್ದರಾಮಯ್ಯ, ಊಟಕ್ಕೆ ಕರ್ಕೊಂಡು ಹೋಗಿ ಎಂದು ಸೂಚಿಸಿದರು. ನಂತರ ತನ್ವೀರ್ ಸೇಠ್ ಊಟ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ನಿಧಾನವಾಗಿ ಊಟ ಮಾಡು ಅಂತ ಆತ್ಮೀಯವಾಗಿ ಹೇಳಿದರು.