ಬೆಂಗಳೂರು: ಜಮಾತ್ ಉಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ (ಜೆಎಂಬಿ) ಶಂಕಿತ ಉಗ್ರನನ್ನು ಮಂಗಳವಾರ ಬಂಧಿಸಿ, ನಗರದಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಎನ್ಐಎ ತಿಳಿಸಿದೆ.
ಜೆಎಂಬಿ ಸಂಘಟನೆಯ ಶಂಕಿತ ಸದಸ್ಯನಾಗಿದ್ದ ನಜೀರ್ ಶೇಖ್, ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ದಿಗಿಲ್ ಪುರ್ ಗ್ರಾಮದವ. ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಉಗ್ರರಿಗೆ ಸ್ಫೋಟಕ ವಸ್ತು ಸರಬರಾಜು ಹಾಗೂ ಹಣ ಸಂಗ್ರಹಿಸಿ ನೀಡುತ್ತಿದ್ದ ಶಂಕೆಯ ಮೇರೆಗೆ ಎನ್ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಂಗಳವಾರ ಅಗರ್ತಲಾದಲ್ಲಿ ನಜೀರ್ ಶೇಖ್ನನ್ನು ಬಂಧಿಸಿದ್ದರು. ಇದೀಗ ಬೆಂಗಳೂರಿಗೆ ಕರೆತಂದು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ನಜೀರ್ ಶೇಖ್ನಿಂದ 5 ಹ್ಯಾಂಡ್ ಗ್ರೆನೇಡ್, 3 ಫ್ಯಾಬ್ರಿಕೇಟೆಡ್ ಗ್ರೆನೇಡ್, 1 ಐಇಡಿ ಬಾಂಬ್, 2 ಟೈಮರ್ ಡಿವೈಸ್, 1 ಬಾಡಿ ಜಾಕೇಟ್, 9mm ಪಿಸ್ತೂಲ್, ಸಜೀವ ಗುಂಡುಗಳು, 1 ಏರ್ ಗನ್ ವಶಪಡಿಸಿಕೊಳ್ಳಲಾಗಿದೆ.
ನಜೀರ್ ಶೇಖ್ ಜೆಎಂಬಿ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ. 2018 ರಿಂದ ಬೆಂಗಳೂರಿನ ಇತರ ಸದಸ್ಯರ ಜೊತೆ ಚಿಕ್ಕಬಾಣಾವರದಲ್ಲಿ ವಾಸವಾಗಿದ್ದ. ಜೈಹಿದ್ ಉಲ್ ಇಸ್ಲಾಂ ಅಲಿಯಾಸ್ ಕೌಸರ್, ನಾಸುಲ್ ಇಸ್ಲಾಂ ಅಲಿಯಾಸ್ ಮೋಟಾ ಅನ್ಸಾ, ಆಸೀಫ್ ಇಕ್ಬಾಲ್ ಸೇರಿದಂತೆ ಇತರರ ಜೊತೆ ವಾಸವಿದ್ದ. ಇವೆರೆಲ್ಲ ಒಟ್ಟುಗೂಡಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.