ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇಂದು ಶಿವಾನಂದವೃತ್ತ ಸಮೀಪ ಇರುವ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದ ಸುರ್ಜೇವಾಲಾ ಅವರು ಮಾತುಕತೆ ನಡೆಸಿದರು. ಮತದಾನೋತ್ತರ ಸಮೀಕ್ಷೆ ಕಾಂಗ್ರೆಸ್ ಪರವಾಗಿದ್ದು, ಮುಂದಿನ ತಂತ್ರಗಾರಿಕೆ ಸಂಬಂಧ ಉಭಯ ನಾಯಕರು ಚರ್ಚಿಸಿದರು.
ಬುಧವಾರ ರಾತ್ರಿಯೇ ಮೈಸೂರಿನಿಂದ ಸಿದ್ದರಾಮಯ್ಯ ವಾಪಸಾಗಿದ್ದು, ಖಾಸಗಿ ಹೋಟೆಲ್ನಲ್ಲಿ ಸುರ್ಜೇವಾಲಾ ಜತೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಸಂದರ್ಭ ಕೂಡ ರಾಜ್ಯದಲ್ಲಿ ವಿವಿಧ ಸಂಸ್ಥೆಗಳು ನೀಡಿರುವ ಸಮೀಕ್ಷೆಯ ಫಲಿತಾಂಶದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರ ರಚಿಸುವ ಸಂಬಂಧ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಮೀಕ್ಷೆಗಳು ಏನೇ ಹೇಳಿದರೂ ಬಿಜೆಪಿಗೆ 115 ಸ್ಥಾನ ಬರುತ್ತೆ: ಬಿಎಸ್ವೈ ವಿಶ್ವಾಸ
ಇನ್ನು, ಅತಂತ್ರ ವಿಧಾನಸಭೆ ರಚನೆಯಾದರೆ ಅದಕ್ಕೇನು ಮಾಡುವುದು? ಜೆಡಿಎಸ್ ಜತೆ ಕೈಜೋಡಿಸುವುದಾ? ಪಕ್ಷೇತರರನ್ನು ಸೆಳೆಯುವುದಾ? ಪಕ್ಷ ಬಿಟ್ಟು ಹೋಗಿ ಸದ್ಯ ಬಿಜೆಪಿ ಪಾಳಯದಲ್ಲಿ ಶಾಸಕರಾಗಿರುವವರನ್ನು ವಾಪಸ್ ಸೆಳೆಯುವುದಾ? ಎಂಬಿತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಸಿದ್ದರಾಮಯ್ಯ ಟ್ವೀಟ್: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಅವರು, ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ನನ್ನದೊಂದು ವಿಶೇಷ ಮನವಿ. ಚುನಾವಣೆಗಾಗಿ ಮನೆ ಮತ್ತು ಸಂಸಾರ ತೊರೆದು ಕೆಲಸ ಮಾಡಿದ್ದೀರಿ. ಈಗ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ- ತಾಯಿ, ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ. ಪ್ರಾಮಾಣಿಕವಾದ ನಮ್ಮ ಹೋರಾಟ ಖಂಡಿತ ಫಲಪ್ರದವಾಗುತ್ತದೆ. ಮತ್ತೊಮ್ಮೆ ನಿಮಗೆಲ್ಲರಿಗೂ ಧನ್ಯವಾದಗಳು ಮತ್ತು ಶುಭಾಶಯಗಳು ಎಂದಿದ್ದಾರೆ.
ನಾನು ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಮಾತ್ರವಲ್ಲ, ಬೇರೆ ರಾಜ್ಯಗಳಿಂದಲೂ ಬಂದು ನನ್ನ ಮೇಲಿನ ಪ್ರೀತಿ-ಅಭಿಮಾನದಿಂದ ತಮ್ಮ ಪಾಡಿಗೆ ತಾವು ಪ್ರಚಾರ ಮಾಡಿದ್ದಾರೆ. ಅವರಲ್ಲೆರನ್ನು ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಲು ಕೂಡಾ ನನಗೆ ಸಾಧ್ಯವಾಗಿಲ್ಲ. ಈ ಪ್ರೀತಿ ಮತ್ತು ಅಭಿಮಾನವೇ ನನ್ನ ಮತ್ತು ಕಾಂಗ್ರೆಸ್ ಪಕ್ಷದ ಶಕ್ತಿ. ಇವರೆಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತಮಗೆ ಡಿಸಿಎಂ ಹುದ್ದೆ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾಧ್ಯಮಗಳಿಗೆ ಉತ್ತರಿಸಿದ್ದು, ಡಿಸಿಎಂ ಹುದ್ದೆ ಸಾಂವಿಧಾನಿಕ ಹುದ್ದೆ ಅಲ್ಲ. ಆದರೆ ಕೆಲವೊಮ್ಮೆ ನಾಯಕರ ಶ್ರಮವನ್ನು ಪರಿಗಣಿಸಿ ಡಿಸಿಎಂ ಹುದ್ದೆ ನೀಡಬೇಕಾಗುತ್ತದೆ. ಏನೇ ಆದ್ರೂ ಸಿಎಂ ಅಂದರೆ ಕ್ಯಾಪ್ಟನ್ ಇದ್ದ ಹಾಗೆ. ಆದರೂ ಕೆಲವೊಮ್ಮೆ ಅನಿವಾರ್ಯವಾಗಿ ಡಿಸಿಎಂ ಹುದ್ದೆಗಳನ್ನು ನೀಡಬೆಕಾಗುತ್ತದೆ. ಪಕ್ಷದ ಹಿರಿಯ ನಾಯಕರ ಮಟ್ಟದಲ್ಲಿ ಏನು ಚರ್ಚೆ ನಡೆಯುತ್ತಿದೆ ಎಂಬುದರ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಸುರ್ಜೇವಾಲಾ ಪ್ರತಿಕ್ರಿಯೆ: ಸಿದ್ದರಾಮಯ್ಯ ಭೇಟಿ ಬಳಿಕ ಸುರ್ಜೇವಾಲಾ ಮಾತನಾಡಿ, ಬದಲಾವಣೆಗೆ ಮತ ಚಲಾಯಿಸಿದ್ದಕ್ಕೆ ಕರ್ನಾಟಕದ ಜನತೆ ಧನ್ಯವಾದಗಳು. 40% ಭ್ರಷ್ಟಾಚಾರ ಸರ್ಕಾರದ ವಿರುದ್ಧ ಮತ ಹಾಕಿದ್ದಾರೆ. ಮೇ 13ಕ್ಕೆ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಕರ್ನಾಟಕವನ್ನು ಮತ್ತೆ ನಾವು ರೀ ಬ್ರಾಂಡ್ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ: ಮುಗಿದ ಚುನಾವಣೆ ತಲೆಬಿಸಿ: ರಿಲಾಕ್ಸ್ ಮೂಡ್ನಲ್ಲಿ ನಾಯಕರು, ಆಪ್ತರೊಂದಿಗೆ ಚಹಾಕೂಟ