ಬೆಂಗಳೂರು: ರಾಜ್ಯದಲ್ಲಿ 2021ರ ಫೆಬ್ರವರಿಯಲ್ಲಿ ನಡೆದಿರುವ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನ ಕುರಿತು ಯಾವುದೇ ಮಾಹಿತಿ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿಲ್ಲ. ಮೌಲ್ಯಮಾಪನದ ಪ್ರಕ್ರಿಯೆ ಈವರೆಗೂ ಪ್ರಾರಂಭವಾಗಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಯಾವುದೇ ಸುಳಿವು ಸಹ ಸಿಕ್ಕಿಲ್ಲ. ಈ ಬಗ್ಗೆ ಅಭ್ಯರ್ಥಿಗಳ ಪರ ನಿಲ್ಲಲು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ಧರಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಈ ಹಿಂದೆ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರು, ಕಾರ್ಯದರ್ಶಿಗಳ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದಿದ್ದೆ. ಯುವ ಜನತೆ ಭರವಸೆ ಕಳೆದುಕೊಳ್ಳುವ ಮುನ್ನ ಮೌಲ್ಯಮಾಪನ ಕುರಿತು ಮಾಹಿತಿ ನೀಡಿ ಎಂದು ಕೇಳಿದ್ದೆ. ಆದರೆ, ಈವರೆಗೂ ಈ ಕುರಿತು ಯಾವುದೇ ಮಾಹಿತಿ ನನಗಾಗಲೀ ಅಥವಾ ಅಭ್ಯರ್ಥಿಗಳಿಗಾಗಲೀ ಲಭ್ಯವಾಗಿಲ್ಲ.
ಹೀಗಾಗಿ ಈ ಕುರಿತಾದ ಮಾಹಿತಿ ಪಡೆಯಲು ಮೇ 31ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಲೋಕಸೇವಾ ಆಯೋಗದ ಮುಖ್ಯ ದ್ವಾರದ ಮುಂದೆ ನಿಲ್ಲುವವನಿದ್ದೇನೆ ಎಂದು ತಿಳಿಸಿದ್ದಾರೆ. ಆಗಲಾದರೂ ಕೆಪಿಎಸ್ಸಿ ಅಧಿಕಾರಿಗಳು 2021ರ ಫೆಬ್ರವರಿ ನಡೆದಿರುವ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನದ ಪ್ರಸ್ತುತ ಹಂತದ (Present Status) ಕುರಿತು ಮಾಹಿತಿ ನೀಡುತ್ತಾರಾ ನೋಡಬೇಕು ಎಂದಿದ್ದಾರೆ.
ಇದನ್ನೂ ಓದಿ: ಸೋಲಿನ ಇತಿಹಾಸ ಬೇಡ, ಗೆಲುವಿನ ಇತಿಹಾಸ ಹೇಳಬೇಕಿದೆ: ಸಚಿವ ಬಿ.ಸಿ. ನಾಗೇಶ