ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೀಗ ಸುಮಲತಾ ಅಂಬರೀಶ್ಗೆ ಕೊರೊನಾ ತಗುಲಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೆಲವರಲ್ಲಿ ಅತಂಕ ಶುರುವಾಗಿದೆ. ಸಂಸದೆ ಸುಮಲತಾ ಜೊತೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರಿಗೆಲ್ಲ ಈಗ ಕೊರೊನಾ ಭಯ ಕಾಡುತ್ತಿದೆ. ಕಳೆದ ಗುರುವಾರ ಸುಲಮತಾ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೊತೆ ಅಂಬಿ ಸಮಾಧಿ ನಿರ್ಮಾಣ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಸುಮಲತಾ ಬಳಸಿದ್ದ ಪೆನ್ ಅನ್ನು ಸಿಎಂ ಯಡಿಯೂರಪ್ಪ ಬಳಸಿ ಕಡತಕ್ಕೆ ಸಹಿ ಹಾಕಿದ್ದರು. ಈಗ ಮುಖ್ಯಮಂತ್ರಿಗಳು ಕೂಡ ಕ್ವಾರಂಟೈನ್ಗೆ ಒಳಗಾಗಬೇಕಾದ ಪರಿಸ್ಥಿತಿ ಬಂದಿದೆ.
ಸುಮಲತಾ ಸದಾ ಆಪ್ತ ಬಳಗದಲ್ಲಿ ಕಾಣಿಸುವ ನಟ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೂ ಈಗ ಕೊರೊನಾ ಭಯ ಕಾಡುತ್ತಿದೆ. ಈಗಾಗಲೇ ರಾಕ್ಲೈನ್ ಕೂಡ ಕೋವಿಡ್-19 ಚೆಕ್ಅಪ್ ಮಾಡಿಸಿದ್ದು ವರದಿಗಾಗಿ ಕಾಯ್ತಿದ್ದಾರೆ, ಎಂಬ ವಿಷಯ ಅವರ ಆಪ್ತಬಳಗದಿಂದ ತಿಳಿದುಬಂದಿದೆ.
ಅಲ್ಲದೆ, ಅಂದಿನ ಸಭೆಯಲ್ಲಿ ಸುಮಲತಾ ಅವರ ಜೊತೆ ಹೋಗಿದ್ದ ಹಿರಿಯ ನಟ ದೊಡ್ಡಣ್ಣ, ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಕರ್ನಾಟಕ ಚನಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಅವರಿಗೂ ಸೋಂಕಿನ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಹೋಂ ಕ್ವಾರಂಟೈನ್ನಲ್ಲಿ ಇರುವುದಾಗಿ ಗುಬ್ಬಿ ಜೈರಾಜ್ ತಿಳಿಸಿದ್ದಾರೆ.