ಬೆಂಗಳೂರು: ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ವಾರ್ ರೂಮ್ ರೀತಿ ತಯಾರಿ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲ್ಯಾಬ್, ಹೆಲ್ಪ್ ಡೆಸ್ಕ್ ಪ್ರಾರಂಭಿಸಲಾಗುತ್ತದೆ. ಎರಡು, ಮೂರು ತಿಂಗಳ ಮಟ್ಟಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ನಿರ್ಧಿಸಿದ್ದೇವೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ವಿವರಿಸಿದರು.
ಬೆಳಗಾವಿ, ಹುಬ್ಬಳ್ಳಿ, ಹಾಸನ, ಶಿವಮೊಗ್ಗ ಅನೇಕ ಕಡೆಗಳಲ್ಲಿ ಎಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಲ್ಯಾಬ್ ಮಾಡಲು ನಿರ್ಧರಿಸಲಾಗಿದೆ. ಮುಂದುವರೆದ ದೇಶಗಳ ರೀತಿ ಕೊರೊನಾ ಸ್ಟೇಜ್ 3 ಮಟ್ಟ ತಲುಪಿದರೆ ಕಷ್ಟವಾಗುತ್ತದೆ. ಆ ನಿಟ್ಟಿನಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಕಟ್ಟಡಗಳನ್ನು ಕೊರೊನಾ ತಡೆಗಟ್ಟಲು ಬಳಸಿಕೊಳ್ಳಲಾಗುತ್ತದೆ ಎಂದರು.
ಇಂದು ಬೆಳಗ್ಗೆ ತುರ್ತಾಗಿ ಎಲ್ಲಾ ವೈದ್ಯಕೀಯ ಕಾಲೇಜು ವೈದ್ಯರ ಸಭೆ ಮಾಡಿದ್ದೇನೆ. ಎಲ್ಲಾ ಜಿಲ್ಲೆಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ನಡೆಸಿದ್ದೇನೆ. ಎಲ್ಲಾ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾಸ್ಪತ್ರೆ ನಮಗೆ ಹೊಂದಿಕೊಂಡಿರುತ್ತವೆ. ವೈದ್ಯಕೀಯ ಕಾಲೇಜುಗಳಲ್ಲಿ 150- 200 ಹಾಸಿಗೆವುಳ್ಳ ವಲಯ ಮಾಡುತ್ತೇವೆ. ರೋಗ ಹೆಚ್ಚಾದವರಿಗೆ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲು ಸೂಚಿಸಲಾಗಿದೆ.
ಆಸ್ಪತ್ರೆ ಬಿಟ್ಟು ಸರ್ಕಾರದ ಇತರೆ ಖಾಲಿ ಇರುವ ಕಟ್ಟಡಗಳನ್ನು ಬಳಸುತ್ತೇವೆ. ಇದರಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಹೆಚ್ಚಿನ ಭತ್ಯೆ, ಇನ್ಸುರೆನ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತೇವೆ ಎಂದು ಸಚಿವರು ಮಾಹಿತಿ ನೀಡಿದ್ರು.
ಕೊರೊನಾ ಸಂಬಂಧ ತುರ್ತು ಸಭೆ:
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಿಧಾನಸೌಧದಲ್ಲಿ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಕೆಲ ಅಧಿಕಾರಿಗಳು ಮಾಸ್ಕ್ ಧರಿಸಿ ಸಭೆಯಲ್ಲಿ ಹಾಜರಾಗಿದ್ದರು. ಸಭೆಯಲ್ಲಿ ವೈರಸ್ ಹರಡದಂತೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.