ಬೆಂಗಳೂರು: ಐಎಂಎ ಮಾಲೀಕ ಹಾಗೂ ಬಹುಕೋಟಿ ವಂಚನೆ ಪ್ರಕರಣ ಪ್ರಮುಖ ಆರೋಪಿ ಮನ್ಸೂರ್ ಖಾನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದು ಖಾತ್ರಿಯಾಗಿದ್ದು, ಹೃದಯಕ್ಕೆ ಎರಡು ಸ್ಟಂಟ್ ಅಳವಡಿಸಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ.
ಎಸ್ಐಟಿ ಕಸ್ಟಡಿ ಅವಧಿ ಅಂತ್ಯವಾಗಿರುವ ಹಿನ್ನೆಲೆ ನ್ಯಾಯಾಲಯ ಮನ್ಸೂರನನ್ನ ಪರಪ್ಪನ ಅಗ್ರಹಾರ ಜೈಲಿನ ಕಸ್ಟಡಿಗೆ ನೀಡಿತ್ತು. ಆದರೆ, ಪರಪ್ಪನ ಅಗ್ರಹಾರ ಜೈಲಿಗೆ ಹೋದ ಮನ್ಸೂರ್ಗೆ ಹೃದಯ ಸಂಬಂಧಿ ಕಾಯಿಲೆ ಉಲ್ಬಣಗೊಂಡ ಹಿನ್ನೆಲೆ ಜೈಲಾಧಿಕಾರಿಗಳು ಆತನನ್ನ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಸದ್ಯ ಮನ್ಸೂರ್ ಹೃದಯಕ್ಕೆ ಎರಡು ಸ್ಟಂಟ್ ಅಳವಡಿಸಲಾಗಿದೆ. ಅನಂತರ ಆತನನ್ನು ಪರಪ್ಪನ ಅಗ್ರಹಾರದಲ್ಲಿರುವ ಜೈಲಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮನ್ಸೂರ್ಗೆ ಜೈಲಾಧಿಕಾರಿಗಳು ಆರೈಕೆ ಮಾಡುವುದರ ಜೊತೆಗೆ ಆತನ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ ಐಎಂಎ ವಂಚನೆ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆ ಹಾಕಿರುವ ಸಿಬಿಐ ಅಧಿಕಾರಿಗಳು, ಸದ್ಯದಲ್ಲೇ ಮನ್ಸೂರ್ನನ್ನ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.