ಬೆಂಗಳೂರು: ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆ ಸಿಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ನಿಯಂತ್ರಣಾ ಕೊಠಡಿ/ಸಹಾಯವಾಣಿಗಳಿಗೆ ಸಾರ್ವಜನಿಕರಿಂದ ಬರುವ ಕರೆಗಳನ್ನು ಸ್ವೀಕರಿಸಬೇಕು. ಅದಕ್ಕೆ ತಕ್ಷಣ ಸ್ಪಂದಿಸಬೇಕು. ಕರೆ ಸ್ವೀಕರಿಸದೇ ಇರುವ ಬಗ್ಗೆ ದೂರುಗಳು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ಸಾವಿಗೀಡಾದ ಇಬ್ಬರು ಹೆಣ್ಣು ಮಕ್ಕಳ ಕುಟುಂಬಕ್ಕೆ ಬಿಬಿಎಂಪಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು. ಮರಗಳ ಅಪಾಯಕಾರಿ ರೆಂಬೆ ಕೊಂಬೆಗಳನ್ನು ಗುರುತಿಸಿ ಕತ್ತರಿಸುವ ಕೆಲಸ ನಿರಂತರವಾಗಿ ಆಗಬೇಕು. ಎರಡು ದಿನಗಳಲ್ಲಿ ನಗರದಲ್ಲಿ ಮಳೆಯಿಂದ ಬಿದ್ದ ಮರಗಳನ್ನು ತೆರವುಗೊಳಿಸಬೇಕು. ಬುಧವಾರ ಅಥವಾ ಗುರುವಾರ ನಗರ ಸಂಚಾರ ಮಾಡುತ್ತಿದ್ದೇನೆ. ಆ ಸಂದರ್ಭದಲ್ಲಿ ಯಾವುದೇ ಲೋಪ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಚಿವ ಆರ್.ಅಶೋಕ್ ಮಾತನಾಡಿ, ಬೆಂಗಳೂರಿನಲ್ಲಿ ಬಿದ್ದಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ಚರಂಡಿಗಳ ಸ್ಲ್ಯಾಬ್ಗಳನ್ನು ಸರಿಪಡಿಸಬೇಕು. ಸರಿಪಡಿಸದಿದ್ದರೆ ಎಇಇಗಳ ತಲೆದಂಡ ಆಗಬೇಕಾಗುತ್ತದೆ. ಬುಧವಾರ ಅಥವಾ ಗುರುವಾರ ಸಿಎಂ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಲಿದ್ದಾರೆ. ಮರದ ಒಂದು ರೆಂಬೆ ಕೂಡಾ ಕಾಣಬಾರದು. 8 ವಲಯಗಳಲ್ಲಿಯೂ ಟಾಸ್ಕ್ ಫೋರ್ಸ್ ರಚನೆ ಮಾಡಲು ಬಿಬಿಎಂಪಿಗೆ ಸೂಚನೆ ನೀಡಲಾಗಿದೆ. ಬಿಬಿಎಂಪಿ, ಪೊಲೀಸ್, ಅರಣ್ಯ, ಸಾರಿಗೆ ಹಾಗೂ ಅಗ್ನಿಶಾಮಕ ಇಲಾಖೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಮರಗಳ ಕೆಳೆಗೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಮುನ್ನೆಚ್ಚರಿಕೆ ವಹಿಸಿ ಅನಾಹುತಗಳನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದರು. ನಗರದ 8 ವಲಯಗಳಲ್ಲಿ ಮ್ಯಾನ್ ಹೋಲ್‍ಗಳನ್ನು ಮುಚ್ಚಬೇಕು. ಜೆಟ್ಟಿಂಗ್ ಮಷಿನ್‍ಗಳು ಲಭ್ಯವಿರಬೇಕು ಎಂಬ ಸೂಚನೆ ನೀಡಲಾಗಿದೆ ಎಂದರು.