ಬೆಂಗಳೂರು: ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇಕಡಾ 50 ರಷ್ಟನ್ನು ಕೋವಿಡ್-19 ಸೋಂಕಿತರಿಗಾಗಿ ಸರ್ಕಾರಕ್ಕೆ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು.
ಬೆಂಗಳೂರಲ್ಲಿ ಪಶ್ಚಿಮ ವಲಯದ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲ ಖಾಸಗಿ ಆಸ್ಪತ್ರೆಗಳು ಸರ್ಕಾರದ ಸೂಚನೆಗಳನ್ನು ಪಾಲಿಸದಿರುವುದು ಮತ್ತು ಕೋವಿಡ್ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಕಂಡುಬಂದಿದೆ ಎಂದರು.
ಅಂತಹ ಆಸ್ಪತ್ರೆಗಳು ಕಾನೂನು ಕ್ರಮ ಎದುರಿಸುವುದು ಖಚಿತ. ಕೋವಿಡ್ ಹಾಗೂ ಕೊರೊನಾ ಹೊರತಾದ ರೋಗಿಗಳಿಗೆ ಸಮಾನ ಮಹತ್ವ ಕೊಟ್ಟು ಚಿಕಿತ್ಸೆ ನೀಡಬೇಕು. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಕೂಡಲೇ ಅವರು ಎಚ್ಚೆತ್ತುಕೊಳ್ಳದಿದ್ದರೆ ಅಂತಹ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಚಿವ ಗೋಪಾಲಯ್ಯ, ಶಾಸಕ ಜಮೀರ್ ಅಹ್ಮದ್, ಪಶ್ಚಿಮ ವಲಯದ ಕೋವಿಡ್ ಉಸ್ತುವಾರಿ ಉಜ್ವಲ್ ಕುಮಾರ್ ಘೋಷ್, ಪಾಲಿಕೆಯ ವಿಶೇಷ ಆಯುಕ್ತ ಬಸವರಾಜು, ಜಂಟಿ ಆಯುಕ್ತ ಚಿದಾನಂದ ಮುಂತಾದವರು ಭಾಗಿಯಾಗಿದ್ದರು.