ಬೆಂಗಳೂರು : ಮಕ್ಕಳ ಕಳ್ಳ ಸಾಗಣೆಯಂತಹ ಕೃತ್ಯಗಳು ಕಂಡು ಬಂದಲ್ಲಿ ಅಥವಾ ಅನುಮಾನ ಬಂದಲ್ಲಿ ಈ ಕುರಿತು ಕಾನೂನು ಸೇವಾ ಪ್ರಾಧಿಕಾರಗಳಿಗೆ ದೂರು - ಮಾಹಿತಿ ನೀಡಿ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಶಶಿಧರ ಶೆಟ್ಟಿ ತಿಳಿಸಿದರು.
ಕೋವಿಡ್ ಹಿನ್ನೆಲೆ ಬಾಲ್ಯ ವಿವಾಹ ಮತ್ತು ಮಕ್ಕಳ ಕಳ್ಳಸಾಗಣೆ ತಡೆ ವಿಷಯದ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಕ್ರಮದಲ್ಲಿ ನ್ಯಾ. ಶೆಟ್ಟಿ ಮಾತನಾಡಿದರು. ಮಕ್ಕಳ ಕಳ್ಳ ಸಾಗಣೆಯಂತಹ ಕೃತ್ಯಗಳು ಕಂಡು ಬಂದಲ್ಲಿ ಇಂತಹ ಕೃತ್ಯಗಳನ್ನು ತಡೆಯಲು ಕಾನೂನು ಸೇವಾ ಪ್ರಾಧಿಕಾರ ಎಲ್ಲ ರೀತಿಯ ಕ್ರಮ ಜರುಗಿಸಲು ಸಿದ್ದವಿದೆ ಎಂದು ನ್ಯಾ. ಶಶಿಧರ ಶೆಟ್ಟಿ ತಿಳಿಸಿದರು.
ಮಕ್ಕಳ ಕಳ್ಳ ಸಾಗಣೆ ಮತ್ತು ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮತ್ತು ತಾಲೂಕು ಪ್ರಾಧಿಕಾರಗಳು ಹಾಗೂ ಬಾಲ ನ್ಯಾಯ ಮಂಡಳಿಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಇಂತಹ ಕೃತ್ಯಗಳ ಬಗ್ಗೆ ಮಾಹಿತಿ ಇದ್ದಲ್ಲಿ ಅಥವಾ ಕೃತ್ಯದ ಬಗ್ಗೆ ತಿಳಿದು ಬಂದಲ್ಲಿ ಪ್ರಾಧಿಕಾರಕ್ಕೆ ತಿಳಿಸಿ. ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಈ ಕುರಿತು ಕಾನೂನಾತ್ಮಕ ಕ್ರಮ ಜರುಗಿಸಲು ಹಾಗೂ ಅಪರಾಧ ತಡೆಗಟ್ಟಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಅಂತೋನಿ ಸೆಬಾಸ್ಟಿಯನ್ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವುದಾಗಿ ತಿಳಿಸಿದರು. ಇದೇ ವೇಳೆ, 'ವಿವಾಹಿತ ಹೆಣ್ಣು ಮಕ್ಕಳ ಸಶಕ್ತೀಕರಣಕ್ಕಾಗಿ ಜೀವನ ಕೌಶಲ್ಯ' ಕೈಪಿಡಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಐಜೆಎಂನ ವಿಲಿಯಂ ಕ್ರಿಸ್ಟೋಫರ್, ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಪಲ್ಲವಿ ಅಕುರಾತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಹಲೀಮಾ ಕೆ. ಡಾ. ಎಂ. ವೆಂಕಟಸ್ವಾಮಿ, ಡಾ. ಆರ್.ವಿ. ಚಂದ್ರಶೇಖರ್, ಎನ್.ವಿ. ವಾಸುದೇವ ಶರ್ಮಾ ಮತ್ತಿತರರು ಭಾಗವಹಿಸಿದ್ದರು.