ಬೆಂಗಳೂರು : ರಾಜ್ಯ ಬಿಜೆಪಿ ಕಾರ್ಯಾಗಾರದಲ್ಲಿ ಇಂದು ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ನಡೆಯಿತು. ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆ ಗೆಲ್ಲುವ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.
ಕೇಂದ್ರ ಮತ್ತು ರಾಜ್ಯ ಎರಡು ಕಡೆಗಳಲ್ಲಿ ನಮ್ಮ ಸರ್ಕಾರವೇ ಇದೆ. ಈಗ ಮೀಸಲಾತಿ ಗೊಂದಲ ಸೃಷ್ಟಿಯಾದರೆ ನಮಗೆ ಡ್ಯಾಮೇಜ್ ಆಗಲಿದೆ. ಈಗಾಗಲೇ ಮೀಸಲಾತಿ ಹೋರಾಟ ಕೈಮೀರಿ ಹೋಗಿದೆ. ಹಾಗಾಗಿ, ಕೂಡಲೇ ಪಕ್ಷ ಮತ್ತು ಹೈಕಮಾಂಡ್ ಮಧ್ಯಪ್ರವೇಶ ಮಾಡಿ ತಿಳಿಗೊಳಿಸಬೇಕು ಎಂದು ಪದಾಧಿಕಾರಿಗಳಿಂದ ಒತ್ತಾಯ ಕೇಳಿ ಬಂದಿದೆ.
ಮೊದಲು ಮೀಸಲಾತಿ ಹೋರಾಟದ ವಿಚಾರವಾಗಿ ಪಕ್ಷ ಒಂದು ನಿಲುವು ತೆಗೆದುಕೊಳ್ಳಬೇಕು. ಸಚಿವರುಗಳು ಬೀದಿ ಬೀದಿಗಳಲ್ಲಿ ಮಾತಾಡ್ತಾರೆ, ಹೋರಾಟ ಮಾಡ್ತಾರೆ. ಒಂದೊಂದು ಸಮುದಾಯದ ನಾಯಕರು ಒಂದೊಂದು ರೀತಿ ಮಾತಾಡ್ತಾರೆ. ಹಾಗಾಗಿ, ಬಿಜೆಪಿ ಪಕ್ಷದ ನಿಲುವು ಸ್ಪಷ್ಟವಾಗಿ ರವಾನೆಯಾಗಬೇಕು.
ಸಚಿವರುಗಳು, ಪಕ್ಷದ ಮುಖಂಡರ ಬಾಯಿ ಮುಚ್ಚಿಸಿ. ಇದು ಸರಿಯಾದ ಸಂದೇಶ ಹೋಗಬೇಕು, ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎಂಬ ಮಾತುಗಳು ಕೇಳಿ ಬಂದಿವೆ. ಈ ಕುರಿತು ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿ, ಮೀಸಲಾತಿ ಹೋರಾಟ ವಿಚಾರವಾಗಿ ಕಡೆಗೂ ರಾಜ್ಯ ಬಿಜೆಪಿ ಎಚ್ಚೆತ್ತಿದೆ ಎಂಬ ಸಂದೇಶ ನೀಡಿದರು.
ವಿವಿಧ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿರುವ ಪಕ್ಷದ ಸಚಿವರು, ಶಾಸಕರು, ಮುಖಂಡರಿಗೆ ಸಂದೇಶ ರವಾನಿಸಲು ನಿರ್ಧಾರ ಮಾಡಿದರು. ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಮೀಸಲಾತಿ ಹೋರಾಟಗಳ ವಿಚಾರ ಬಿಜೆಪಿ ಸರ್ಕಾರ, ಪಕ್ಷದ ನಿಲುವೇನು ಎಂಬುದರ ಬಗ್ಗೆ ಎರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲು ಎರಡ್ಮೂರು ದಿನದಲ್ಲಿ ಸರ್ಕಾರ, ಪಕ್ಷ, ಸಂಘದ ಮಹತ್ವದ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಇದನ್ನೂ ಓದಿ: ಕಾನೂನುಗಳ ಅಸ್ಪಷ್ಟತೆ ನಿವಾರಣೆಗೆ ಕ್ರಮ; ಸಚಿವ ಮೊಮ್ಮಾಯಿ