ಬೆಂಗಳೂರು: ಇಂಡಿಯಾ ಒಕ್ಕೂಟವನ್ನು ಬಲಪಡಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗಿದೆ. ಈ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ಬೆಂಬಲ ಕೊಡುವ ಮೂಲಕ ಸರ್ಕಾರವು ರಾಜ್ಯದ ಹಿತ ಕಡೆಗಣಿಸಿದೆ. ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯೋ ತಮಿಳುನಾಡಿನ ಮುಖ್ಯಮಂತ್ರಿಯೋ ಎನ್ನುವ ಪ್ರಶ್ನೆಯನ್ನು ಅವರೇ ಹಾಕಿಕೊಳ್ಳಲಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟವನ್ನು ಬಲಪಡಿಸುವ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ನಿತ್ಯ 5000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮೊದಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಿತ್ತು. ಆದರೆ ಸುಪ್ರೀಂ ಕೋರ್ಟ್ ಸಂಪರ್ಕ ಮಾಡದೇ ತಮಿಳುನಾಡನ್ನು ತೃಪ್ತಿಪಡಿಸಲು ಈ ರೀತಿ ನೀರು ಬಿಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.
ಸಂಕಷ್ಟದ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕಿರುವುದು ಅತ್ಯಂತ ಅವಶ್ಯಕ. ಆದರೆ ಸರ್ಕಾರ ಇದನ್ನು ಮಾಡುತ್ತಿಲ್ಲ. ತಮಿಳುನಾಡಿನಲ್ಲಿ ಕಾವೇರಿ ನದಿಯನ್ನು ನಂಬಿ ಬೆಳೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಕಾಯಿದೆ ಪ್ರಕಾರ 1.8 ಲಕ್ಷ ಹೆಕ್ಟರ್ ಮಾತ್ರ ಬೆಳೆ ಬೆಳೆಯಲು ಅವಕಾಶವಿದೆ. ಆದರೆ ತಮಿಳುನಾಡಿನಲ್ಲಿ 3,50,000 ಹೆಕ್ಟೇರಿಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಬೆಳೆಯಾಗುತ್ತಿದೆ. ಇಷ್ಟು ಬೆಳೆಗೆ ಎಲ್ಲಿಂದ ನೀರು ಕೊಡಲು ಸಾಧ್ಯ ಎನ್ನುವುದನ್ನು ಸುಪ್ರೀಂ ಕೋರ್ಟ್‌ಗೆ ನಮ್ಮ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದು ದೂರಿದರು.
ತಮಿಳುನಾಡಿನಲ್ಲಿ ಎರಡನೇ ಬೆಳೆ ಬೆಳೆಯಲಾಗುತ್ತಿದೆ. ನಮ್ಮ ರಾಜ್ಯದ ರೈತರ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ತಮಿಳುನಾಡಿನವರು ಬೆಳೆಪ್ರದೇಶ ವಿಸ್ತರಣೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈಗಲಾದರೂ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಪಕ ವಾದ ಮಂಡಿಸಿ ರಾಜ್ಯದ ಹಿತ ಕಾಪಾಡಬೇಕು. ಈಗಾಗಲೇ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಸಂಪೂರ್ಣ ವಿಫಲವಾಗಿರುವುದನ್ನು ಖಂಡಿಸುತ್ತೇನೆ. ಮುಂದೆಯಾದರೂ ಸಮರ್ಪಕವಾಗಿ ವಾದ ಮಂಡಿಸಿ ರಾಜ್ಯದ ಹಿತ ಕಾಯುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಕಾವೇರಿ ರಕ್ಷಣಾ ಯಾತ್ರೆಗೆ ಬಿಜೆಪಿ ಸಜ್ಜು: ಬಿಎಸ್ವೈ ನೇತೃತ್ವದಲ್ಲಿ ಮಹತ್ವದ ಸಭೆ