ಬೆಂಗಳೂರು : ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ವೈವಿಧ್ಯಮಯ ಜಾನಪದ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಕೆಂಪೇಗೌಡರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು, ಚಿತ್ತಾಕರ್ಷಕ ಕಲಾತಂಡಗಳೊಂದಿಗೆ ಸಂಘದ ಆವರಣದಿಂದ ವಿಧಾನಸೌಧದವರೆಗೂ ಮೆರವಣಿಗೆ ನಡೆಸಲಾಯಿತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ ನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಸಂಘದ ಆವರಣದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಜಾನಪದ ಕಲಾತಂಡಗಳ ಮೆರವಣೆಗೆಗೆ ಚಾಲನೆ ನೀಡಲಾಯಿತು.
ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ: ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ, ಮಾಜಿ ಸಚಿವ ಆರ್. ಅಶೋಕ್, ಶಾಸಕ ಸಿ. ಎನ್ ಬಾಲಕೃಷ್ಣ, ಆದಿ ಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚಪ್ಪಗೌಡ ಸೇರಿದಂತೆ ವಿವಿಧ ಗಣ್ಯರು ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಉಪಾಧ್ಯಕ್ಷ ಎಲ್. ಶ್ರೀನಿವಾಸ್, ಸಿ. ದೇವರಾಜು, ಪ್ರಧಾನಕಾರ್ಯದರ್ಶಿ ಹೆಚ್. ಸಿ ಜಯಮುತ್ತು, ಖಜಾಂಚಿ ಸಿ.ಎಂ ಮಾರೇಗೌಡರು ಹಾಗೂ ಇತರ ನಿರ್ದೇಶಕರು ಭಾಗವಹಿಸಿದ್ದರು.
ಇದನ್ನೂ ಓದಿ: 'ನಮ್ ಬಿಟ್ಟು ಹೋಗಬೇಡಿ ಸರ್..': ವರ್ಗಾವಣೆಗೊಂಡ ಶಿಕ್ಷಕರನ್ನ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು!
ನಾಡಿನ ಸಮಸ್ತರಿಗೂ ಒಳ್ಳೆಯದಾಗಲಿ: ನಂತರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಯೊಬ್ಬರು ನಾಡಪ್ರಭು ಕೆಂಪೇಗೌಡರನ್ನು ನೆನೆಯಬೇಕು. ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರು ನಿರ್ಮಿಸಿದ ಬೆಂಗಳೂರು ವಿಶ್ವಮಾನ್ಯವಾಗಿದೆ. ಕೆಂಪೇಗೌಡರ ಜಯಂತಿಯಂದು ನಾಡಿನ ಸಮಸ್ತರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ಇದನ್ನೂ ಓದಿ: ಎಂಜಿನಿಯರಿಂಗ್ ವ್ಯಾಸಂಗ: ಕೆಲವು ಕೋರ್ಸ್ಗೆ ಸೀಟು ಸಿಗಲ್ಲ: ಇನ್ನು ಕೆಲವನ್ನಂತೂ ಕೇಳೋರೇ ಇಲ್ಲ
ಕೆಂಪೇಗೌಡರ ಭಾವಚಿತ್ರವಿಟ್ಟು ಪೂಜಿಸಬೇಕು: ಮಾಜಿ ಸಚಿವ ಆರ್. ಅಶೋಕ್ ಮಾತನಾಡಿ, ಕೆಂಪೇಗೌಡರ ಪ್ರತಿಮೆಗಳಿರುವ ಸ್ಥಳವನ್ನು ರಾಜ್ಯ ಸರ್ಕಾರ ಇನ್ನಷ್ಟು ಅಭಿವೃದ್ಧಿ ಮಾಡಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹಾಗೂ ವಿಧಾನಸೌಧದ ಮುಂಭಾಗ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲಾಯಿತು. ಕೆಂಪೇಗೌಡರು ಪ್ರತಿಯೊಂದು ಕಸುಬಿನವರಿಗೂ ಒಂದೊಂದು ಪೇಟೆ ನಿರ್ಮಿಸಿಕೊಟ್ಟಿದ್ದರು. ವಿಶ್ವಮನ್ನಣೆಗಳಿಸಿರುವ ಬೆಂಗಳೂರಿನಲ್ಲಿ ನೆಲೆಸಿರುವ ಸರ್ವರೂ ಮನೆಯಲ್ಲಿ ಕೆಂಪೇಗೌಡರ ಭಾವಚಿತ್ರವಿಟ್ಟು ಪೂಜಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಕೆಂಪೇಗೌಡ ಜಯಂತಿ ಉತ್ಸವ: ಬೆಂಗಳೂರಿಗೂ ನನಗೂ ಅವಿನಾಭಾವ ಸಂಬಂಧ.. ಡಿಸಿಎಂ ಡಿಕೆಶಿ
ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು: ಸಂಘದ ಆವರಣದಿಂದ ಮಂಗಳವಾದ್ಯಗಳೊಂದಿಗೆ ಆರಂಭಗೊಂಡ ಮೆರವಣಿಗೆಯಲ್ಲಿ ಬೆಳ್ಳಿರಥವಲ್ಲದೆ, ಕುದುರೆ ಮೇಲೆ ಕೆಂಪೇಗೌಡರ ವೇಷಧಾರಿ, ನಂದಿಧ್ವಜ, ಡೊಳ್ಳುಕುಣಿತ, ಪೂಜಾಕುಣಿತ, ವೀರಗಾಸೆ, ಹುಲಿವೇಷ, ಚಿಲಿಪಿಲಿಗೊಂಬೆ, ಪಟಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಇದನ್ನೂ ಓದಿ: ಕೆಂಪೇಗೌಡ ಜಯಂತಿ ಉತ್ಸವ: ಬೆಂಗಳೂರಿಗೂ ನನಗೂ ಅವಿನಾಭಾವ ಸಂಬಂಧ.. ಡಿಸಿಎಂ ಡಿಕೆಶಿ