ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಇದರ ಬೆನ್ನಲ್ಲೇ ಬಹುತೇಕ ಕ್ಲಿನಿಕ್ಗಳು ಕ್ಲೋಸ್ ಆಗಿವೆ. ಜನಸಂದಣಿ ತಡೆಗಟ್ಟುವ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದ್ದು, ಇದೀಗ ಟೆಲಿ ಮೆಡಿಸಿನ್ಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಕರ್ನಾಟಕ ಮೆಡಿಕಲ್ ಕೌನ್ಸಿಲ್ನಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಮನೆಗಳಲ್ಲೇ ಕುಳಿತು ವೈದ್ಯರನ್ನ ರೋಗಿ ಸಂಪರ್ಕಿಸಬಹುದು. ದೂರವಾಣಿ, ಆನ್ಲೈನ್, ಇ-ಸೇವೆಗಳ ಮೂಲಕವೇ ರೋಗಿಗೆ ಸಾಮಾನ್ಯ ಸೇವೆ ನೀಡಬಹುದಾಗಿದೆ. ಇನ್ನು ಕೆಲವು ಗೈಡ್ಲೈನ್ ನೀಡಿದ್ದು, ಇಂಜೆಕ್ಷನ್, ಡ್ರಿಪ್ಸ್ ಮುಂತಾದ ದೇಹಕ್ಕೆ ಚುಚ್ಚುವ ಔಷಧಗಳನ್ನು ಸೂಚಿಸುವಂತಿಲ್ಲ. ರೋಗಿ ವೈದ್ಯರಿಗೆ ಪರಿಚತವಿರಬೇಕು, ಈಗಾಗಲೇ ಇರುವ ಕಾಯಿಲೆಯ ಫಾಲೋ ಅಪ್ ಮಾಡಲು ಇದು ಸಹಕಾರಿಯಾಗಲಿದೆ. ರೋಗಿಯು ಮಾಡಿಸಿರುವ ಯಾವುದಾದರೂ ಪರೀಕ್ಷೆ, ಸ್ಕ್ಯಾನ್ ರಿಪೋರ್ಟ್ಗಳನ್ನು ವೈದ್ಯರೊಂದಿಗೆ ಹಂಚಿಕೊಳ್ಳಬಹುದು. ವೈದ್ಯರು ಅದಕ್ಕೆ ತಕ್ಕ ಔಷಧಿ ಸೂಚಿಸಬಹುದು. ಮುಖ್ಯವಾಗಿ ತಜ್ಞ ವೈದ್ಯರು ಮಾತ್ರ ಈ ಸೇವೆಯನ್ನ ನೀಡಬಹುದು ಎಂದು ಮಾಹಿತಿ ನೀಡಿದೆ.