ಬೆಂಗಳೂರು: ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಕ್ಷೇತ್ರಗಳನ್ನು ನಿಗದಿ ಮಾಡಿ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದ್ದ ಕರಡು ಅಧಿಸೂಚನೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಗಳನ್ನು ಹಿಂಪಡೆಯಲಾಗಿದೆ.
ಚುನಾವಣಾ ಆಯೋಗದ ಕರಡು ಅಧಿಸೂಚನೆ ಹಾಗೂ ಸರ್ಕಾರದ ತಿದ್ದುಪಡಿ ನಿಯಮಗಳನ್ನು ಪ್ರಶ್ನಿಸಿ ಡಿ.ಎಂ.ಮಲ್ಲಿಕಾರ್ಜುನ್ ಹಾಗೂ ಇತರರು ಹೈಕೋರ್ಟ್‌ಗೆ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು. ಆ ಅರ್ಜಿಗಳು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪೀಠದ ಮುಂದೆ ಇಂದು ವಿಚಾರಣೆಗೆ ಬಂದಿದ್ದವು.
ವಿಚಾರಣೆಗೆ ಹಾಜರಾದ ಅರ್ಜಿದಾರ ಪರ ವಕೀಲರು, ಅರ್ಜಿಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಿ ಮೆಮೊ ಸಲ್ಲಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಗಳನ್ನು ಹಿಂಪಡೆಯಲು ಅನುಮತಿ ನೀಡುವ ಜೊತೆಗೆ ಮುಂದೆ ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿತು.
ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಕ್ಷೇತ್ರಗಳನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗವು ಜುಲೈ 2021ರಲ್ಲಿ ಕರಡು ಅಧಿಸೂಚನೆ ಪ್ರಕಟಿಸಿತ್ತು. ಮತ್ತೊಂದೆಡೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಮೀಸಲು ನಿಗದಿಪಡಿಸುವ ವಿಚಾರದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಗಳಿಗೆ ಸರ್ಕಾರವು ತಿದ್ದುಪಡಿ ಕೂಡ ತಂದಿತ್ತು. ಇದನ್ನ ಪ್ರಶ್ನಿಸಿ ತಕರಾರು ಅರ್ಜಿಯನ್ನು ಹೈಕೋರ್ಟ್‌ಗೆ ಹೂಡಿದ್ದರು.
ಇದನ್ನೂ ಓದಿ: ಸರ್ಕಾರದಿಂದ ವಿವಾದಾತ್ಮಕ ನಡೆ : ಅನಗತ್ಯ ಹಾಕಲಾದ ರೌಡಿಶೀಟ್ ಕೈಬಿಡಲು ಪೊಲೀಸರಿಗೆ ಸೂಚನೆ