ಬೆಂಗಳೂರು : ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು. ಪೆಟ್ರೋಲ್, ಡೀಸೆಲ್‌ನಂತಹ ಇಂಧನದಿಂದ ಹಿಡಿದು ಅಡುಗೆ ಅನಿಲ, ಅಡುಗೆ ಎಣ್ಣೆಯಂತಹ ದಿನಬಳಕೆ ವಸ್ತುಗಳವರೆಗೂ, ರೈತರ ರಸಗೊಬ್ಬರದಿಂದ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಕಬ್ಬಿಣ, ಸಿಮೆಂಟ್‌ವರೆಗೂ ಎಲ್ಲ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಬದುಕನ್ನು ದುಸ್ತರ ಮಾಡಿದೆ ಎಂದು ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಖಂಡಿಸಿ ಅಖಿಲ ಭಾರತ ಕಾಂಗ್ರೆಸ್ ದೇಶಾದ್ಯಂತ ನಡೆಸಿದ ಆಂದೋಲನದ ಭಾಗವಾಗಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಾವೆಲ್ಲರೂ ಇಂದು ಬೆಲೆ ಏರಿಕೆ ವಿರುದ್ಧ ಮಾತನಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಚುನಾವಣೆ ಗೆದ್ದ ನಂತರ ಬಡವರ ಲೂಟಿಗೆ ಇಳಿದಿದೆ. ಪಂಚರಾಜ್ಯ ಚುನಾವಣೆ ನಂತರ ಪ್ರತಿ ನಿತ್ಯ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದರೆ ಆದಾಯ ಮಾತ್ರ ಪಾತಾಳಕ್ಕೆ ಹೋಗುತ್ತಿದೆ ಎಂದು ಹರಿಹಾಯ್ದರು.
ಇದನ್ನೂ ಓದಿ: ಅವ್ರರವ್ರ ರಕ್ಷಣೆ ಅವ್ರು ಮಾಡ್ಕೊಳ್ಳಲು ಎಲ್ರೂ ಸ್ವತಂತ್ರರು.. ನಾವ್ ಮಾತ್ನಾಡಬಾರ್ದು, ನಮ್ ಕೆಲ್ಸಾ ಮಾತ್ನಾಡ್ಬೇಕು : ಸಿಎಂ
ಕೋವಿಡ್‌ನಿಂದ 4.5 ಲಕ್ಷ ಜನ ಸತ್ತರೂ 45 ಸಾವಿರ ಲೆಕ್ಕ ಕೊಡುತ್ತಿದ್ದಾರೆ. ಅವರಿಗೂ ಪರಿಹಾರ ಕೊಟ್ಟಿಲ್ಲ. ದೇಶದಲ್ಲಿ ಶೇ.40ರಷ್ಟು ಕಮಿಷನ್ ಪಡೆಯುವ ಸರ್ಕಾರ ಇದ್ದರೆ ಅದು ರಾಜ್ಯ ಬಿಜೆಪಿ ಸರ್ಕಾರ. ಈ ಸರ್ಟಿಫಿಕೇಟ್ ಕೊಟ್ಟವರು ನಾವಲ್ಲ. ಇದನ್ನು ಕೊಟ್ಟವರು ನೋಂದಣಿಯಾಗಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷರು. ಈ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರು ಮಾತನಾಡುತ್ತಿಲ್ಲ ಎಂದು ಲೇವಡಿ ಮಾಡಿದರು.