ಬೆಂಗಳೂರು: 'ರಾಜ್ಯದ ಬಿಜೆಪಿ ಸರ್ಕಾರ ಈಗ ಚುನಾವಣಾ ಕಳ್ಳತನಕ್ಕೆ ಮುಂದಾಗಿದೆ. ಜನರ ಮತವನ್ನೇ ಕಳ್ಳತನ ಮಾಡಲು ಹೊರಟಿದೆ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮತದಾರರ ಮಾಹಿತಿಯನ್ನು ಖಾಸಗಿ ಸಂಸ್ಥೆಯ ಮೂಲಕ ಕದಿಯುವ ಕಾರ್ಯ ಮಾಡಿದ್ದಾರೆ. ಈ ಮೂಲಕ ಚುನಾವಣಾ ಅಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತ ತುಷಾರ್ ಗಿರಿನಾಥ್, ಉಸ್ತುವಾರಿ ಸಚಿವ ಹಾಗೂ ಸಿಎಂ ಬೊಮ್ಮಾಯಿ ಹಾಗೂ ಚುನಾವಣಾ ಆಯೋಗ ಒಟ್ಟಾಗಿ ಈ ಕಾರ್ಯ ನಡೆಸುತ್ತಿದೆ ಎಂದರು.
ಚಿಲುಮೆ ಎಂಟರ್ಪ್ರೈಸಸ್ ಪ್ರೈ.ಲಿ. ಹೆಸರಿನ ಸಂಸ್ಥೆಗೆ ಅಕ್ರಮವಾಗಿ ಅಧಿಕಾರ ನೀಡಲಾಗಿದೆ. ಇತರೆ ಎರಡು ಕಂಪನಿಗಳಾದ ಡಿಎಪಿ, ಹೊಂಬಾಳೆ ಸಂಸ್ಥೆ ಸಹಕಾರ ನೀಡಲಿವೆ. ಇವರು ಇವಿಎಂ ಪ್ರಿಪರೇಷನ್ ಅನ್ನು ರಾಜಕೀಯ ಪಕ್ಷಗಳಿಗೆ ಮಾಡಿಕೊಡುವ ಕಾರ್ಯ ಮಾಡುತ್ತಾರೆ. ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಾಯೋಗಿಕ ಸರ್ವೆ ಆರಂಭಿಸಿದ್ದಾರೆ. ಡಿಜಿಟಲ್ ಸಮೀಕ್ಷಾ ಆ್ಯಪ್ ಆರಂಭಿಸಿ ಈ ವ್ಯಾಪಾರ ನಡೆಯುತ್ತಿದೆ. ಇವರಿಗೆ ಬೆಂಗಳೂರಿನ ಮತದಾರರ ಸಮೀಕ್ಷೆಗೆ ಸಂಪೂರ್ಣ ಪರವಾನಗಿ ನೀಡಲಾಗಿದೆ. ಬೂತ್ ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳ ಸಹಕಾರ ಇದಕ್ಕಿದೆ ಎಂದು ಗಂಭೀರ ಆರೋಪ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಭಾರತೀಯ ರಾಜಕೀಯ ಇತಿಹಾಸದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿರಲಿಲ್ಲ. ಪ್ರತ್ಯೇಕ ಕಾರ್ಡ್ಗಳನ್ನು ಸಹ ಸರ್ವೇ ಮಾಡುವವರಿಗೆ ನೀಡಲಾಗಿದೆ. ಪ್ರತಿ ಮನೆಗೆ ತೆರಳಿ ಮತದಾರರ ಸಂಪೂರ್ಣ ವಿವರ ಪಡೆಯುತ್ತಾರೆ. ಇವರು ಜನರಿಂದ ಸಂಪೂರ್ಣ ಮಾಹಿತಿ ಪಡೆದು ತಮ್ಮ ಖಾಸಗಿ ವೆಬ್ಸೈಟ್ ಗೆ ಅಪ್ಲೋಡ್ ಮಾಡುತ್ತಾರೆ. ಚುನಾವಣಾ ಆಯೋಗದ ಗರುಡ ವೆಬ್ಸೈಟ್ಗೆ ನೀಡಲ್ಲ. ಈ ಮಾಹಿತಿಯನ್ನು ಶಾಸಕ, ಸಂಸದ ಸ್ಥಾನಕ್ಕೆ ನಿಲ್ಲುವ ಅಭ್ಯರ್ಥಿಗಳಿಗೆ ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷ್ಣಪ್ಪ, ರವಿಕುಮಾರ್ ಎಂಬುವರು ಇದರ ಕಿಂಗ್ ಪಿನ್ಗಳು. ಇವರು ಸರ್ಕಾರದ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಸರ್ಕಾರದ ಡಿಸಿಎಂ ಹುಟ್ಟುಹಬ್ಬ ಸಮಾರಂಭದಲ್ಲಿ ಸಹ ರವಿಕುಮಾರ್ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರಿ, ಬಿಬಿಎಂಪಿ ಅಧಿಕಾರಿಗಳು ನೇರವಾಗಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಖಾಸಗಿ ಸಂಸ್ಥೆಗೆ ಸರ್ವೇ ಮಾಡಲು ಅಧಿಕಾರ ನೀಡಿದ್ದು ಯಾರು?. ಪರವಾನಗಿ ನೀಡಿದ್ದು ಯಾಕೆ?. ಚುನಾವಣಾ ಸಮೀಕ್ಷೆಯನ್ನು ಖಾಸಗಿಯವರಿಗೆ ನೀಡಿರುವ ವಿಚಾರವಾಗಿ ಜಾಹೀರಾತು ಯಾಕೆ ನೀಡಿಲ್ಲ. ಚುನಾವಣಾ ಆಯೋಗ ಇಲ್ಲವೇ.
ಸರ್ಕಾರ ಯಾಕೆ ಈ ಬಗ್ಗೆ ಗಮನ ಹರಿಸಿಲ್ಲ. ಒಂದು ಸಂಸ್ಥೆ ಉಚಿತವಾಗಿ ಈ ಕಾರ್ಯ ಮಾಡುತ್ತಿದೆ ಎಂದರೆ ಅದು ಅನುಮಾನಾಸ್ಪದವಲ್ಲವೇ?, ಹೇಗೆ ಖಾಸಗಿ ಸಂಸ್ಥೆ ಹೇಗೆ ಮತದಾರರ ಖಾಸಗಿ ಮಾಹಿತಿ ಕಲೆ ಹಾಕುತ್ತದೆ. ಮತದಾರರಿಂದ ಮಾಹಿತಿ ಕದಿಯಲು ಅವಕಾಶ ನೀಡಲಾಗುತ್ತಿದೆ. ಸರ್ಕಾರದ ಅಧಿಕಾರಿಗಳು ಇದಕ್ಕೆ ಸಹಕಾರ ನೀಡುತ್ತಿರುವುದು ಏಕೆ?.. ಸಿಎಂ, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಹಾಗೂ ಈ ಖಾಸಗಿ ಸಂಸ್ಥೆ ವ್ಯಕ್ತಿಗಳ ನಡುವಿನ ಸಂಬಂಧವೇನು? ಇದೊಂದು ಗಂಭೀರ ಅಪರಾಧವಾಗಿದೆ. ಚುನಾವಣಾ ಅಕ್ರಮವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಕೂಡಲೇ ಅವರ ಬಂಧನವಾಗಬೇಕು. ಕೂಲಂಕಶ ತನಿಖೆ ಆಗಬೇಕು. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೂಲಕ ಒಂದು ತಿಂಗಳ ಒಳಗೆ ಈ ಅಕ್ರಮದ ತನಿಖೆ ಆಗಬೇಕು ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಕಾರ್ಯಾಧ್ಯಕ್ಷರಾದ ರಾಮಲಿಂಗ ರೆಡ್ಡಿ, ಸಲೀಂ ಅಹಮ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಈಸ್ಟ್ ಇಂಡಿಯಾ ಕಂಪನಿ ರೀತಿಯಲ್ಲಿ ಬಿಜೆಪಿ ಅಡಳಿತ.. ರಣದೀಪ್ ಸಿಂಗ್ ಸುರ್ಜೇವಾಲಾ