ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವ ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ. ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶಕ್ಕೆ ಎಸ್ಎಸ್ಎಸ್ಎಲ್ಸಿ ಅಂಕಗಳನ್ನೂ ಪರಿಗಣಿಸಲು ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ.
ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವು ಇನ್ನಷ್ಟು ಸಮಗ್ರವಾಗಲು ಹಾಗೂ ಹೆಚ್ಚು ನ್ಯಾಯಯುತವಾಗಲು ಈ ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ ಫಲಿತಾಂಶಗಳನ್ನೂ ಅವಲೋಕಿಸಿ, ಸೂಕ್ತ ಮೌಲ್ಯವನ್ನು ಕಲ್ಪಿಸುವ ಮೂಲಕ ಫಲಿತಾಂಶ ಘೋಷಣೆ ಮಾಡಬೇಕೆಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವತಿಯಿಂದ ಅಂಕಿ-ಅಂಶಗಳನ್ನು ಪಡೆದು, ಪ್ರಥಮ ಪಿಯುಸಿ ಅಂಕಗಳೊಂದಿಗೆ ಸೂಕ್ತ ರೀತಿಯಲ್ಲಿ ಹೊಂದಿಸಿ ಜೂನ್ ತಿಂಗಳ ಅಂತ್ಯಕ್ಕೆ ಗ್ರೇಡಿಂಗ್ ಫಲಿತಾಂಶಗಳನ್ನು ಘೋಷಿಸುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.