ಬೆಂಗಳೂರು: ಫೆಬ್ರವರಿಯಲ್ಲಿ ನಡೆಯುವ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆ. 17ರಿಂದ 26ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ಹೊರಡಿಸಿದೆ.
ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರಶ್ನೆಪತ್ರಿಕೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದಲೇ ರಾಜ್ಯ ಮಟ್ಟದಲ್ಲಿ ಸಿದ್ಧಪಡಿಸಿ ಸರಬರಾಜು ಮಾಡಲು ಅನುಮತಿ ನೀಡಿ ಆದೇಶಿಸಲಾಗಿದೆ.
ಇನ್ನು ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಹಾಜರಾಗಬಹುದಾದ ವಿದ್ಯಾರ್ಥಿಗಳ ಮಾಹಿತಿಯನ್ನು ಕ್ರೋಢೀಕರಿಸುವುದು, ಪೂರ್ವ ಸಿದ್ಧತಾ ಪರೀಕ್ಷೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿ ರವಾನಿಸುವಂತೆ ಸೂಚಿಸಲಾಗಿದೆ.
ಸ್ವೀಕರಿಸಿದ ಪ್ರಶ್ನೆಪತ್ರಿಕೆಗಳನ್ನು(ಪಾರ್ಸೆಲ್) ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಾಲೂಕು ಕೇಂದ್ರದ ಭದ್ರತಾ ಕೊಠಡಿಯಲ್ಲಿ ಶೇಖರಿಸಿ ನಂತರ ಎಲ್ಲಾ ವಿಷಯವಾರು ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ದಿನ ಮುನ್ನವೇ ಶಾಲೆಗಳಿಗೆ ವಿತರಿಸಬೇಕು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲಾ ಹಂತದಲ್ಲಿ ಮೌಲ್ಯಮಾಪನ ಮಾಡುವುದು, ಮೌಲ್ಯಮಾಪನಗೊಂಡ ನಂತರ ಸಂಬಂಧಿಸಿದ ಶಾಲೆಯಲ್ಲಿ ಫಲಿತಾಂಶ ಪ್ರಕಟಿಸಬೇಕು. ಫಲಿತಾಂಶವನ್ನು ವಿಶ್ಲೇಷಣೆ ಮಾಡಿ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಯೋಜನೆ ಮೂಲಕ ವಾರ್ಷಿಕ ಪರೀಕ್ಷೆಗೆ ಸಿದ್ಧಗೊಳಿಸುವುದು ಸಂಬಂಧಿಸಿದ ಮುಖ್ಯೋಪಾಧ್ಯಾಯರ ಜವಾಬ್ದಾರಿ ಆಗಿರುತ್ತದೆ ಎಂದು ತಿಳಿಸಲಾಗಿದೆ.
ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಹೀಗಿದೆ:
ಫೆ.17: ಪ್ರಥಮ ಭಾಷೆ(ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ)
ಫೆ.18: ಗಣಿತ
ಫೆ.19: ದ್ವಿತೀಯ ಭಾಷೆ(ಇಂಗ್ಲೀಷ್ ಹಾಗೂ ಕನ್ನಡ)
ಫೆ.20: ತೃತೀಯ ಭಾಷೆ(ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ ಹಾಗೂ ತುಳು)
ಫೆ.22: ಸಮಾಜ ವಿಜ್ಞಾನ
ಫೆ.24: ವಿಜ್ಞಾನ