ಬೆಂಗಳೂರು : ಪರೀಕ್ಷೆಗಳಲ್ಲಿ ಮಾಸ್ ಕಾಪಿ ಮಾಡುವುದನ್ನ ತಡೆಯಲು ಹಾಗೂ ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆ ಮಾಡಿ, ವಿವರಣಾತ್ಮಕ ದೀರ್ಘಾವಧಿ ಪ್ರಶ್ನೆಗಳಿಗೆ ಆದ್ಯತೆ ನೀಡಿದೆ. ಆದರೆ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹೊಸ ಪರೀಕ್ಷಾ ನಿಯಮಕ್ಕೆ ವಿರೋಧ ವ್ಯಕ್ತವಾಗಿದೆ.
ಪರೀಕ್ಷೆಯಲ್ಲಿ ಹೆಚ್ಚು ಬದಲಾವಣೆ ಮಾಡದೇ, 2 ಅಂಕದ ಪ್ರಶ್ನೆಯನ್ನು ಕಡಿಮೆ ಮಾಡಿ 5 ಅಂಕದ ಪ್ರಶ್ನೆಗಳನ್ನ ಪರಿಚಯಿಸಿದೆ. 49 ಪ್ರಶ್ನೆಗಳಿಂದ 38 ಪ್ರಶ್ನೆಗಳಿಗೆ ಇಳಿಸಿದೆ. ಕಲಿಕಾ ಗುಣಮಟ್ಟದ ವೃದ್ಧಿ, ಕಂಠಪಾಠ ಮಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ಈ ಹೊಸ ನಿಯಮ ಜಾರಿಗೆ ಮಾಡಿತ್ತು. ಆದರೆ ಇದಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.
ಏಕಾಏಕಿ ಪರೀಕ್ಷಾ ಪದ್ಧತಿ ಬದಲಾಯಿಸಿರುವುದರಿಂದ ಮಕ್ಕಳು ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಅನ್ನೋದು ಖಾಸಗಿ ಶಾಲೆಗಳ ವಾದ. ಹೀಗಾಗಿ 6-8ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಮಾಡಿದರೆ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಿದೆ. ಆ ನಂತರ ಎಸ್‌ಎಸ್‌ಎಲ್‌ಸಿ ಪರಿಕ್ಷೆ ಪದ್ಧತಿ ಬದಲಾಯಿಸಿ ಎಂದು ಖಾಸಗಿ ಶಾಲೆಗಳ ಒಕ್ಕೂಟ, ಕುಸುಮ ಸೇರಿದಂತೆ ಹಲವು ಸಂಘಟನೆಗಳು ಸಚಿವ ಸುರೇಶ್ ಕುಮಾರ್ಗೆ ಮನವಿ ಮಾಡಿದರು.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವರು, ಹೊಸ ಪದ್ಧತಿ ಸಂಬಂಧ ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಕೂಡ ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಆದರೆ ವಿದ್ಯಾರ್ಥಿಗಳು ಇದನ್ನ ಅರ್ಥ ಮಾಡಿಕೊಳ್ಳಲು ಸಮಯ ಬೇಕಿದೆ ಎಂದು ಹಲವು ಸಂಘಟನೆಗಳು ಮನವಿ ಮಾಡಿದೆ. ಹೀಗಾಗಿ, ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇನ್ನು ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಿಗದಿತ ಅಂಕಗಳನ್ನು ಪಡೆಯದಿದ್ದರೆ, ಅನುತ್ತೀರ್ಣ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಹೇಳಿದರು.