ಬೆಂಗಳೂರು: ಕಾಂಗ್ರೆಸ್ ಶಾಸಕರ ಮನೆಗಳಿಗೂ ಜನ ನುಗ್ಗುವ ಕೆಲಸ ಮಾಡ್ತಾರೆ. ಕಾಂಗ್ರೆಸ್ನವರಿಗೆ ಜನ ತಕ್ಕ ಪಾಠ ಕಲಿಸ್ತಾರೆ ಎಂದು ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಬಿಜೆಪಿ ಕಚೇರಿಯಲ್ಲಿ ಪರಾಜಿತ ಅಭ್ಯರ್ಥಿಗಳ ಸಭೆ ಬಳಿಕ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿಗೆ ತರಲು ಕಾಂಗ್ರೆಸ್ಗೆ ಕಷ್ಟ ಆಗ್ತಿದೆ. ಸರ್ಕಾರದ ಖಜಾನೆ ಖಾಲಿ ಆಗ್ತಿದೆ. ಉಚಿತ ಕರೆಂಟ್ ಸಿಗುತ್ತೆ ಅಂತ ನಂಬಿದ ಬಡವರಿಗೆ ಮೋಸ ಮಾಡಿದ್ದಾರೆ. ಕರೆಂಟ್ ದರ ಇನ್ನಷ್ಟು ಹೆಚ್ಚಿಗೆ ಮಾಡಿದ್ದಾರೆ. ಇದನ್ನೆಲ್ಲ ಜನ ಗಮನಿಸ್ತಿದಾರೆ ಎಂದು ಕಿಡಿ ಕಾರಿದ್ದಾರೆ.
ಗ್ಯಾರಂಟಿಗಳಲ್ಲಿ ಷರತ್ತುಗಳನ್ನು ಹಾಕಿದ್ದಾರೆ. ಇವರ ಗ್ಯಾರಂಟಿಗಳು ಜಾರಿಗೆ ಬರುವ ಲಕ್ಷಣ ಕಾಣಿಸ್ತಿಲ್ಲ. ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸ್ತಾರೆ. ಉಚಿತವಾಗಿ ಗ್ಯಾರಂಟಿಗಳನ್ನು ಕೊಡ್ತೀವಿ ಅಂತ ಹೇಳಿ ಷರತ್ತುಗಳನ್ನು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಜನ ಸುಮ್ಮನಿರಲ್ಲ. ಜನ ಬೀದಿಗೆ ಇಳಿದು ತಮ್ಮ ಹಕ್ಕುಗಳನ್ನು ಪಡೆದುಕೊಳ್ತಾರೆ ಎಂದು ಎಚ್ಚರಿಕೆ ನೀಡಿದರು.
ಪಂಚ ಯೋಜನೆ ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡುವೆ ಪ್ರದೀಪ್ ಈಶ್ವರ್: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡುವುದಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗುರುವಾರ ಹೇಳಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಾದ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆ ಯಜಮಾನಿಗೆ 2 ಸಾವಿರ, ಉಚಿತ ವಿದ್ಯುತ್, 10 ಕೆಜಿ ಅಕ್ಕಿ ವಿತರಣೆ, ಯುವನಿಧಿ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಕ್ಷೇತ್ರದ ಜನತೆಗೆ ಯಾವುದೇ ಸಮಸ್ಯೆ ಇದ್ದರೂ ಚಿಕ್ಕಬಳ್ಳಾಪುರ ನಗರದಲ್ಲಿ ಕಚೇರಿ ತೆರೆಯುತ್ತಿದ್ದೇನೆ. ಅಲ್ಲಿಗೆ ಬಂದು ಮನವಿ ಸಲ್ಲಿಸಬಹುದಾಗಿದೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟು 1,800 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ವಾರ ವೈಯಕ್ತಿಕವಾಗಿ 1,000 ರೂ. ಸ್ಕಾಲರ್ಶಿಪ್ ನೀಡುತ್ತೇನೆ. ಜತೆಗೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಮತ್ತೊಂದೆಡೆ ಚಿಂತಾಮಣಿ ಬಿಜೆಪಿ ಮುಖಂಡ ವೇಣುಗೋಪಾಲ್ ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿದ ಪಂಚ ಗ್ಯಾರಂಟಿಗಳನ್ನು ಜನತೆಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆ ಘೋಷಿಸಿ ಅಧಿಕಾರಕ್ಕೇರಿದೆ. ಅಧಿಕಾರಕ್ಕೆ ಬಂದ 24 ಗಂಟೆಯ ಒಳಗೆ ಘೋಷಣೆಯಾದ ಎಲ್ಲ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರುವುದಾಗಿಯೂ ಹೇಳಲಾಗಿತ್ತು. ಇದೀಗ ಅಧಿಕಾರಕ್ಕೆ ಬಂದು ಒಂದು ತಿಂಗಳಾಗುತ್ತಿದ್ದರೂ ಯಾವುದೇ ಗ್ಯಾರಂಟಿ ಜಾರಿಗೆ ಬಂದಿಲ್ಲ. ಕೂಡಲೇ ಸಿಎಂ ಹಾಗೂ ಡಿಸಿಎಂ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಕೊಡುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ಬಾರದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: B.K.Hariprasad: ಹೆಡ್ಗೆವಾರ್ ತರಹದ ಹೇಡಿಗಳನ್ನು ನಮ್ಮ ಮಕ್ಕಳ ಪಠ್ಯದಲ್ಲಿರಲು ಬಿಡಲ್ಲ-ಬಿ.ಕೆ.ಹರಿಪ್ರಸಾದ್