ದೊಡ್ಡಬಳ್ಳಾಪುರ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ತಡೆದು, ವಾಹನಕ್ಕೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ವಾರಾಂತ್ಯದ ದಿನಗಳಲ್ಲಿ ಆಂಧ್ರದ ಹಿಂದೂಪುರದಿಂದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುವುದು ಸಾಮಾನ್ಯವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಇಂದು ನಡೆದಿದ್ದೇನು?: ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದ ಬಳಿ ಶ್ರೀರಾಮಸೇನೆ ಕಾರ್ಯಕರ್ತರು ವಾಹನಗಳನ್ನು ತಡೆದು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ವಾಹನಗಳಲ್ಲಿ ಗೋಮಾಂಸ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡು ಗೋಮಾಂಸ ಸಾಗಾಟ ಮಾಡಿದ್ದ ಕಾರಿಗೆ ಬೆಂಕಿ ಇಟ್ಟರು. ಆರೋಪಿಗಳನ್ನು ರಸ್ತೆಯಲ್ಲೇ ಕೂರಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು. ದೊಡ್ಡಬಳ್ಳಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಶ್ರೀರಾಮಸೇನೆಯ ಪ್ರಧಾನ ಕಾರ್ಯದರ್ಶಿ ಸುಂದರೇಶ್ ನಗರಲ್ ಮಾತನಾಡಿ, "ಹಿಂದೂಪುರದಿಂದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಗೋಮಾಂಸ ರಫ್ತು ಮಾಡುತ್ತಿದ್ದ ಮಾಹಿತಿ ಸಿಕ್ಕಿತ್ತು. ಹೀಗಾಗಿ ಒಂದು ವಾಹನವನ್ನು ನಾವು ಹಿಡಿದಿದ್ದೆವು. ಈ ವಾಹನಗಳಲ್ಲಿ ಮಾಂಸ ರಪ್ತು ಮಾಡುತ್ತಿದ್ದರೂ ಟೋಲ್ ಬಳಿ ಇರುವ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದರು" ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಂಗಳೂರು: ಎರಡೂವರೆ ಕ್ವಿಂಟಾಲ್ ಗೋಮಾಂಸ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಬಜರಂಗದಳ.. ಆರೋಪಿಗಳ ಬಂಧನ