ಬೆಂಗಳೂರು: ಈಸ್ಟರ್ ಹಬ್ಬದ ದಿನ ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಿಂದ ಎಚ್ಚೆತ್ತಿರುವ ನಗರ ಪೊಲೀಸರು ಭದ್ರತಾ ದೃಷ್ಟಿಯಿಂದ ಮಹತ್ವದ ಆದೇಶ ಹೊರಡಿಸಿದ್ದಾರೆ.
ನಗರದ ಎಲ್ಲಾ ಪ್ರಮುಖ ಹೊಟೇಲ್,ಚರ್ಚ್,ದೇವಾಲಯಗಳ ಮುಖ್ಯಸ್ಥರೊಂದಿಗೆ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಹಾಗೂ ಎಲ್ಲಾ ವಿಭಾಗದ ಡಿಸಿಪಿಗಳು ಸಾರ್ವಜನಿಕರ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಅಲ್ಲದೇ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಭದ್ರತಾ ದೃಷ್ಟಿಯಿಂದ ಮಹತ್ವದ ಆದೇಶವನ್ನೂ ಹೊರಡಿಸಿದ್ದಾರೆ.
ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆ 2017ರ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿಕೊಳ್ಳಬೇಕು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಬೇಕು. ಅದಕ್ಕಾಗಿ ಸಿಸಿಟಿವಿ ಅಳವಡಿಕೆ, ಖಾಸಗಿ ಸೆಕ್ಯುರಿಟಿ ಅಥವಾ ಸದರಿ ಸಂಸ್ಥೆಗಳ ಸ್ವಯಂ ಸೇವಕರ ಬಳಕೆ ಮಾಡಿಕೊಂಡು ಅಂತಹ ವ್ಯಕ್ತಿಗಳ ತಪಾಸಣೆ ಮಾಡಬೇಕು. ಹೊಟೇಲ್, ಶಾಪಿಂಗ್ ಮಾಲ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಹೆಚ್ಎಂಡಿ, ಡಿಎಫ್ಎಂಡಿ, ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಿಕೊಳ್ಳಬೇಕು.
ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಸೂಚನೆ ನೀಡಬೇಕು. ಗುರುತಿನ ಚೀಟಿಗಳ ಖಾತ್ರಿ ಕಡ್ಡಾಯವಾಗಬೇಕು. ಆಯಾ ಸಂಸ್ಥೆಗಳಿಗೆ ಸೇರಿದ ಖಾಸಗಿ ಪ್ರದೇಶಗಳಲ್ಲಿಯೂ ಎಚ್ಚರವಹಿಸಬೇಕು ಮತ್ತು ಅವುಗಳ ನಿರ್ವಾಹಕರು ತಮ್ಮ ವ್ಯಾಪ್ತಿಯ ಠಾಣೆಯೊಂದಿಗೆ ಸತತ ಸಂಪರ್ಕ ಹೊಂದಿರಬೇಕು. ಮುಖ್ಯವಾಗಿ ಈ ವ್ಯವಸ್ಥೆಯನ್ನು ಶಾಶ್ವತವಾಗಿ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.