ಬೆಂಗಳೂರು: 2018ರ ಚುನಾವಣೆ ವೇಳೆ ಸಲ್ಲಿಸಿರುವ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರುನ್ನು ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಗೊಳಿಸಿ ಆದೇಶಿಸಿದೆ.
ವಿಶ್ವಕನ್ನಡ ಸಮಾಜದ ಸಂಸ್ಥಾಪಕ ಎಸ್. ಆನಂದ್ ಎಂಬುವರು ಸಲ್ಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ. ಪ್ರೀತ್ ಅವರು ಈ ಆದೇಶ ಮಾಡಿದ್ದಾರೆ. ನಾಮಪತ್ರದಲ್ಲಿ ಸುಳ್ಳು ಮಾಹಿತಿ ನಿಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಆದರೆ, ಪ್ರತಿವಾದಿ ಎಚ್ ಡಿ ಕುಮಾರಸ್ವಾಮಿ ಅವರು ಮಾಹಿತಿ ಬಹಿರಂಗ ಪಡಿಸಿಲ್ಲ. ಸುಳ್ಳು ಹೇಳುವುದು ಮತ್ತು ಮಾಹಿತಿ ಬಹಿರಂಗ ಪಡಿಸದಿರುವುದು ವಿಭಿನ್ನ ನೆಲೆಗಳಲ್ಲಿ ನಿಂತಿವೆ. ಆದ ಕಾರಣದ ಆರೋಪಿಗಳು ತಪ್ಪೆಸಗಿಲ್ಲ. ಇದು ಐಪಿಸಿ 181ರ ಅಡಿ ಅಪರಾಧವಾಗಿ ಸಾಭೀತಾಗುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಅಲ್ಲದೆ, ಪ್ರತಿವಾದಿಗಳಿಗೆ ರಾಧಿಕಾ ಕುಮಾರಸ್ವಾಮಿ ಅವರು ಎರಡನೇ ಪತ್ನಿ ಎನ್ನುವುದಕ್ಕೆ ಅರ್ಜಿದಾರರು ಯಾವುದೇ ಪುರಾವೆಗಳನ್ನು ನೀಡಿಲ್ಲ. ಆದ್ದರಿಂದ ದೂರುದಾರರ ಹೇಳಿಕೆಗಳನ್ನು ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಮೊದಲ ಪತ್ನಿ ಜೀವವಂತವಾಗಿದ್ದಲ್ಲಿ ಎರಡನೇ ಪತ್ನಿ ಎಂಬುದು ಪರಿಕಲ್ಪನೆಗೆ ಬರುವುದಿಲ್ಲ. ಜೊತೆಗೆ, ಮಕ್ಕಳಿಗೆ ಸಂಬಂಧಿಸಿದಂತೆ ನಿಯಮಗಳ ಪ್ರಕಾರ ನಾಮಪತ್ರದಲ್ಲಿ ಮಾಹಿತಿ ನೀಡುವುದು ಅಗತ್ಯವಿಲ್ಲ. ಈ ವಿಚಾರ ಸಂಬಂಧ ಪ್ರಮಾಣ ಪತ್ರ ಸಲ್ಲಿಸುವ ನಮೂನೆ 26ರ ಮಕ್ಕಳ ಕುರಿತು ಮಾಹಿತಿ ನೀಡಲು ಯಾವುದೇ ಅಂಕಣ ತೋರಿಸಿಲ್ಲ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾಗೊಳಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?: ಖಾಸಗಿ ದೂರು ನಿಡಿದ್ದ ಆನಂದ್ ಅವರು, 2018ರ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ತನ್ನ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಪುತ್ರಿ ಶಮಿಕಾ ಕುಮಾರಸ್ವಾಮಿ ಅವರ ಕುರಿತಂತೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೆ, ಐಪಿಸಿ ಸೆಕ್ಷನ್ 181 (ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡುವುದು) ಮತ್ತು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 125 (ಎ) (ಮಾಹಿತಿ ಒದಗಿಸಲು ವಿಫಲವಾಗುವುದು) ಅಡಿಯಲ್ಲಿ ತಪ್ಪೆಸಗಿದ್ದಾರೆ. ಹೀಗಾಗಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಪದಗ್ರಹಣ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ: ಸಿ ಟಿ ರವಿ