ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ಕುರಿತು ಸುಗಮ ಚರ್ಚೆ ನಡೆಯದ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಇಂದು ಪತ್ರಕರ್ತರ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದ ಸ್ಪೀಕರ್, ಕಾಂಗ್ರೆಸ್ನವರ ನಡೆ ಬೇಸರ ತರಿಸಿತು ಎಂದು ಹಲವು ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿಧಾನಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಬಗ್ಗೆ ಚರ್ಚಿಸಲು ಈ ಹಿಂದೆಯೇ ತೀರ್ಮಾನ ಆಗಿತ್ತು. ಚರ್ಚೆಯಲ್ಲಿ ಭಾಗವಹಿಸಲು, ಕಾಂಗ್ರೆಸ್ನಿಂದ 19 ಸದಸ್ಯರು, ಬಿಜೆಪಿಯಿಂದ 15 ಹಾಗೂ ಜೆಡಿಎಸ್ ನಿಂದ 13 ಮಂದಿ ಸದಸ್ಯರು ಹೆಸರು ಕೊಟ್ಟಿದ್ರು. ಆದರೆ ಈಗ ಕಾಂಗ್ರೆಸ್ನವರು ವಿರೋಧ ಮಾಡ್ತಿದ್ದಾರೆ. ಕಾಂಗ್ರೆಸ್ನವರಿಗೆ ಸಭಾತ್ಯಾಗ ಮಾಡಿ, ಇತರ ಸದಸ್ಯರಿಗೆ ಚರ್ಚಿಸಲು ಅವಕಾಶ ಕೊಡಿ ಎಂದು ಹೇಳಿದ್ದೇವೆ. ಆದರೂ ಕೂಡ ಅವರು ಒಪ್ಪುತ್ತಿಲ್ಲ. ನಾನು ಮತ್ತೆ ಮರಳಿ ಪ್ರಯತ್ನ ಮಾಡುತ್ತೇನೆ ಎಂದರು.
'ಆರ್.ಎಸ್ .ಎಸ್. ಅಜೆಂಡಾ ಅಲ್ಲ'
ಇದು ಪ್ರಧಾನಿ ನರೇಂದ್ರ ಮೋದಿ ಅಥವಾ ಆರ್.ಎಸ್.ಎಸ್. ಅಜೆಂಡಾ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲೇಬೇಕು. ಒಂದು ದೇಶ ಒಂದು ಚುನಾವಣೆ ಬಗ್ಗೆ ನಾವು ಇಲ್ಲಿ ಏನು ಮಾಡುವುದಕ್ಕೂ ಅಧಿಕಾರ ಇಲ್ಲ. ಆದರೆ ಈ ಬಗ್ಗೆ ಚರ್ಚೆ ಮಾಡಿ ಒಂದು ಸ್ವರೂಪ ಕೊಡಬಹುದು. ಅದಕ್ಕಾಗಿ ಇದನ್ನು ಚರ್ಚೆಗೆ ತರಲಾಗಿದೆ ಎಂದು ಹೇಳಿದರು.
ಒಂದು ದೇಶ ಒಂದು ಚುನಾವಣೆ ಕುರಿತು ಚರ್ಚೆ ಬಗ್ಗೆ ಈಗಾಗಲೇ ಚುನಾವಣಾ ಆಯೋಗದ ಜೊತೆಯೂ ಚರ್ಚೆ ಮಾಡಿದ್ದೇವೆ. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ. ಮಾರ್ಚ 31ರೊಳಗೆ ಒಂದು ದಿನ ಆದರೂ ಇದರ ಬಗ್ಗೆ ಚರ್ಚೆಯಾಗಬೇಕು. ಮಂಗಳವಾರ ಕಲಾಪ ಸಲಹಾ ಸಮಿತಿ ಸಭೆ ಕರೆದು ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಮೊದಲ ಬಾರಿಗೆ ಒಂದು ಸರ್ಕಾರದ ಚೌಕಟ್ಟಿನೊಳಗೆ ಈ ಚರ್ಚೆ ನಡೆಸಲು ಪ್ರಯತ್ನಿಸಿದೆ. ಈ ಕುರಿತು ಮತ್ತೆ ಚರ್ಚೆಗೆ ಅವಕಾಶ ಮಾಡಿಕೊಡುವ ಆಲೋಚನೆ ಇದೆ. ಈ ಬಗ್ಗೆ ಕಾಂಗ್ರೆಸ್ ಜೊತೆ ಮತ್ತೆ ಸಮಾಲೋಚನೆ ಮಾಡುತ್ತೇನೆ. ಒಂದು ದೇಶ, ಒಂದು ಚುನಾವಣೆ ಕುರಿತ ಚರ್ಚೆ ಅಪೂರ್ಣವಾಗಿದೆ. ಹಾಗಾಗಿ, ಅಪೂರ್ಣ ಚರ್ಚೆಯ ಬಗ್ಗೆ ಲೋಕಸಭೆ ಸ್ಪೀಕರ್ಗೆ ಮಾಹಿತಿ ಕಳಿಸಲ್ಲ ಎಂದರು.
'ಆದೇಶ ವಾಪಸ್ ಪಡೆಯಲ್ಲ'
ಭದ್ರಾವತಿ ಶಾಸಕ ಬಿ. ಸಂಗಮೇಶ್ ಅಮಾನತಿಗೆ ಸಮರ್ಥನೆ ನೀಡಿದ ಸ್ಪೀಕರ್ ಕಾಗೇರಿ, ನಿಯಮ 348ರಡಿಯಲ್ಲಿ ಸಂಗಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಸದನದ ಒಪ್ಪಿಗೆ ಪಡೆದೇ ಅಮಾನತು ಮಾಡಲಾಗಿದೆ. ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಮೊಬೈಲ್ ನೋಡಿದ್ದಕ್ಕೆ ಪ್ರಭು ಚೌಹಾಣ್ರನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಒಂದು ದಿನದ ಮಟ್ಟಿಗೆ ಹೊರಗೆ ಹಾಕಿದ್ರು. ಇದೀಗ ಅಸಭ್ಯವಾಗಿ ವರ್ತಿಸಿರುವುದಕ್ಕೆ ಸಂಗಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಈಗ ಈ ಆದೇಶವನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.