ಬೆಂಗಳೂರು: ಟ್ರೋಲ್ ಮಾಡುತ್ತಾರೆಂಬ ಹಿಂಜರಿಕೆ, ಅಳಕು ಇಲ್ಲದೇ ಹೊಸ ಸದಸ್ಯರು ಮುಕ್ತವಾಗಿ ಮಾತನಾಡಿ ಎಂದು ಸಭಾಧ್ಯಕ್ಷ ಯು ಟಿ ಖಾದರ್ ಅವರು ವಿಧಾನಸಭೆಯಲ್ಲಿ ಧೈರ್ಯ ತುಂಬಿದರು. ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಆಡಳಿತ ಪಕ್ಷದ ಶಾಸಕ ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಟ್ರೋಲ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾನು ಈ ಸ್ಪೀಕರ್ ಸ್ಥಾನದಲ್ಲಿ ಕೂರಲು ಟ್ರೋಲ್ ಮಾಡಿದವರು ಕಾರಣ. ಅವರು ನಮ್ಮ ಬೆಳವಣಿಗೆಗೆ ಕಾರಣ ಆಗ್ತಾರೆ. ಹೊಸದಾಗಿ ಶಾಸಕರಾದಾಗ ಮಾತನಾಡುವುದು ಸಹಜ. ಹೆದರಿಕೆ ಬೇಡ ಧೈರ್ಯವಾಗಿ ಮಾತನಾಡಿ ಎಂದು ನೂತನ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಹುರಿದುಂಬಿಸಿದರು.
ಆತ್ಮವಿಶ್ವಾಸದಿಂದ ಮಾತನಾಡಿ, ಸಂವಿಧಾನ ಬದ್ಧವಾಗಿ ಮಾತನಾಡಿ ಅಷ್ಟೇ. ಹೆಚ್ಚು ಕಡಿಮೆ ಆದರೆ ಏನೂ ತೊಂದರೆ ಇಲ್ಲ. ಇದು ಪರೀಕ್ಷೆ ಹಾಲ್ ಅಥವಾ ನ್ಯಾಯಾಲಯ ಅಲ್ಲ. ಫ್ರೀ ಆಫ್ ಮೈಂಡ್ ಅಲ್ಲಿ ಮಾತನಾಡಿ ಎಂದು ಸಲಹೆ ನೀಡಿದರು. ಆಗ ಸಭಾಧ್ಯಕ್ಷರ ಸಲಹೆಯನ್ನು ಸ್ವೀಕರಿಸಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳನ್ನು ಬಲಪಡಿಸಬೇಕು ಹಾಗೂ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವ್ಯಾಸಂಗದ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಶಾಲೆಗಳ ಶಿಕ್ಷಕರು ಹೆಚ್ಚು ಗುಣಮಟ್ಟ ಹೊಂದಿದ್ದಾರೆ: ಸಿದ್ಧಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಯವರನ್ನು ಸ್ಮರಿಸಿದ ಅವರು, 1 ರಿಂದ 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ರಾಜ್ಯ ಸರ್ಕಾರ ಉನ್ನತ ಶಿಕ್ಷಣದ ವೆಚ್ಚ ಭರಿಸಬೇಕು. ಆ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬಹುದು. ಎಂಬಿಬಿಎಸ್ ಕೋರ್ಸ್ಗೆ ಸರ್ಕಾರ 59,000 ರೂ. ಶುಲ್ಕ ನಿಗದಿ ಮಾಡಿದೆ. ಕೂಲಿ ಕೆಲಸ ಮಾಡುವವರ ಮಕ್ಕಳು ಈ ಹಣವನ್ನು ಭರಿಸಲಾಗುವುದಿಲ್ಲ. 7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರು 8 ರಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ತೆರಳುತ್ತಿದ್ದಾರೆ. ಉನ್ನತ ಶಿಕ್ಷಣ ವೆಚ್ಚವನ್ನು ಸರ್ಕಾರ ಭರಿಸಿದರೆ ಇದು ತಪ್ಪಲಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಶಿಕ್ಷಕರು ಹೆಚ್ಚು ಗುಣಮಟ್ಟ ಹೊಂದಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಸರ್ಕಾರಿ ಆಸ್ಪತ್ರೆಗಳನ್ನು ಕೂಡ ಬಲಗೊಳಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ನನ್ನ ತಂದೆ-ತಾಯಿಯನ್ನು ಕಳೆದುಕೊಂಡೆ. ನಮ್ಮ ಕ್ಷೇತ್ರದಲ್ಲಿ ಇಂದು ಬೆಳಗ್ಗೆ ಟ್ರ್ಯಾಕ್ಟರ್ ಅಪಘಾತವಾಗಿದ್ದು, 7 ಜನರ ಪರಿಸ್ಥಿತಿ ಗಂಭೀರವಾಗಿದೆ. ಅವರಿಗೆ ತುರ್ತು ಚಿಕಿತ್ಸೆ ಒದಗಿಸಲಾಗಿದೆ ಎಂದರು.
ಇಬ್ಬರಿಗೆ ಭಾರತ ರತ್ನ, ಮೂವರಿಗೆ ಪದ್ಮಭೂಷಣ ಪ್ರಶಸ್ತಿ: ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ನನ್ನಂಥ ಕೋಟ್ಯಂತರ ಬಡವರ ಪಾಲಿಗೆ ಅನುಕೂಲ. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದವರು ವಿಧಾನಸಭೆ ಪ್ರವೇಶ ಮಾಡುವಂತಾಗಿದೆ. ನಮ್ಮ ಕೋಲಾರ ಜಿಲ್ಲೆಯಲ್ಲಿ ಇಬ್ಬರಿಗೆ ಭಾರತ ರತ್ನ, ಮೂವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿವೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿವೆ. ಗೃಹಜ್ಯೋತಿಯಿಂದ ಮಕ್ಕಳು ಹೆಚ್ಚು ಓದಲು ಅನುಕೂಲವಾಗಿದೆ. ಇದರಿಂದ ವಿದ್ಯಾರ್ಥಿಗಳ ಬಾಳು ಬೆಳಗಲಿದೆ. ಮನೆಯೊಡತಿಗೆ ನೀಡುವ 2,000 ರೂ. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಈ ಎಲ್ಲವೂ ಬಡವರಿಗೆ ಅನುಕೂಲಕರ ಎಂದು ಹೇಳಿದರು.
ಹಸಿವಿನ ಬೆಲೆ ಹಸಿದವರಿಗೇ ಗೊತ್ತಿದೆ. ಅದಕ್ಕಾಗಿಯೇ ಮುಖ್ಯಮಂತ್ರಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ವಿರೋಧಪಕ್ಷಗಳು ರಾಜಕೀಯ ಬೇಡ ಎಂದು ಮನವಿ ಮಾಡಿದರು.
ಬೆಳಗ್ಗೆ ಬಿಜೆಪಿ ಶಾಸಕರ ಗೈರು : ಇಂದು ಬೆಳಗ್ಗೆ ವಿಧಾನಸಭೆ ಸಮಾವೇಶಗೊಂಡಾಗ ಬಿಜೆಪಿ ಶಾಸಕರು ಗೈರು ಹಾಜರಾಗಿದ್ದರು. ವಿಧಾನಸಭೆಯ ಹೊರಗಡೆ ಶಾಸಕರು ಧರಣಿಯಲ್ಲಿ ನಿರತರಾಗಿದ್ದರಿಂದ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಬಿಜೆಪಿ ಸದಸ್ಯರ ಆಸನಗಳು ಖಾಲಿ ಉಳಿದಿದ್ದವು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತಿದ್ದರು.
ಇದನ್ನೂ ಓದಿ: ಅಡ್ಜೆಸ್ಟ್ಮೆಂಟ್ ರಾಜಕೀಯ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ ಸವಾಲು!