ಬೆಂಗಳೂರು: ಕಾಂಗ್ರೆಸ್ನ 14 ಹಾಗೂ ಜೆಡಿಎಸ್ನ ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದ್ದಾರೆ. ಈ ಮೂಲಕ ಅತೃಪ್ತರಿಗೆ ಆಘಾತ ನೀಡಿದ್ದಾರೆ.
ಶಾಸಕರ ಭವನದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಪಕ್ಷದ ವಿರುದ್ಧ ಬಂಡಾಯವೆದ್ದ ಶಾಸಕರನ್ನುಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರು ನೀಡಿದ್ದರು. ಹಾಗೆಯೇ ಕುಮಾರಸ್ವಾಮಿಯವರು ಜೆಡಿಎಸ್ ಅತೃಪ್ತರನ್ನು ಶಾಸಕತ್ವದಿಂದ ಅನರ್ಹಗೊಳಿಸುವಂತೆ ದೂರು ನೀಡಿದ್ದರು ಎಂದು ವಿವರಿಸಿದರು.
ಈ ಹಿಂದಿನ ತಮಿಳುನಾಡು ಸಭಾಧ್ಯಕ್ಷರು ಅನರ್ಹತೆ ಸಂಬಂಧ ನೀಡಿದ ತೀರ್ಪು ಆಧರಿಸಿ ನಾನು ಅನರ್ಹತೆ ಬಗ್ಗೆ ತೀರ್ಮಾನವನ್ನು ಕೈಗೊಂಡಿದ್ದೇನೆ. ಅದರಂತೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಹಿರೇಕೆರೂರ್ ಶಾಸಕ ಬಿಸಿ ಪಾಟೀಲ್, ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಂ ಹೆಬ್ಬಾರ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು, ವಿಜಯನಗರ ಶಾಸಕ ಆನಂದ್ ಸಿಂಗ್, ಶಿವಾಜಿನಗರ ಶಾಸಕ ರೋಷನ್ ಬೇಗ್, ಆರ್.ಆರ್.ನಗರ ಶಾಸಕ ಮುನಿರತ್ನ, ಚಿಕ್ಕಬಳ್ಲಾಪುರ ಶಾಸಕ ಕೆ.ಎಸ್.ಸುಧಾಕರ್, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರು ಪಕ್ಷಾಂತರ ನಿಷೇಧ ಕಾಯ್ದೆಯ 10ನೇ ಷೆಡ್ಯೂಲ್ ಪ್ರಕಾರ ಅನರ್ಹರಾಗುತ್ತಾರೆ. ಜುಲೈ 28 ರಿಂದ 15ನೇ ವಿಧಾನಸಭ ಕಾಲಾವಧಿ ಮುಗಿಯುವ ತನಕ ಈ ಶಾಸಕರು ಅನರ್ಹರಾಗಿತ್ತಾರೆ ಎಂದು ಸ್ಪಷ್ಟಪಡಿಸಿದರು. ಇದರ ಜತೆಗೆ ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ್ ಪಾಟೀಲ್ ಕೂಡ ಪಕ್ಷದ ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅನರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
ಜೆಡಿಎಸ್ನ ಹುಣಸೂರು ಶಾಸಕ ಹೆಚ್. ವಿಶ್ವನಾಥ್, ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಕೂಡಾ ಅನರ್ಹಗೊಂಡಿದ್ದು, ಜುಲೈ 28 ರಿಂದ 15ರ ವಿಧಾನಸಭೆ ಕಾಲಾವಧಿ ಮುಗಿಯುವ ತನಕ ಅನರ್ಹರಾಗಿರುತ್ತಾರೆ ಎಂದು ತಿಳಿಸಿದರು.
ನಾನು ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ. ಸ್ಪೀಕರ್ ಆಗಿ ಸರ್ವಾನುಮತದಿಂದ ನಾನು ಆಯ್ಕೆಯಾಗಿದ್ದೇನೆ. ಧನವಿನಿಯೋಗ ಮಸೂದೆ ಅಂಗೀಕರಿಸುವುದು ನನ್ನ ಕರ್ತವ್ಯ. ನನಗೆ ಸಮಯಾವಕಾಶದ ಕೊರತೆ ಇತ್ತು. ಈ ನಿರ್ಧಾರಗಳನ್ನು ನಿಯಮದ ಪ್ರಕಾರ, ನ್ಯಾಯಾಂಗ ಪರಿಮಿತಿಯೊಳಗೆ ತೆಗೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಬಿಎಸ್ಪಿ ಶಾಸಕ ಎನ್.ಮಹೇಶ್ ವಿರುದ್ಧ ದೂರು ಬಂದಿದ್ದು, ಈ ಬಗ್ಗೆ ನಾಳೆ ಪರಿಶೀಲನೆ ನಡೆಸಲಾಗುವುದು ಎಂದು ಇದೇ ವೇಳೆ ಹೇಳಿದರು.
ಜುಲೈ 22 ರಂದು ಈ ಅತೃಪ್ತ ಶಾಸಕರು ವಿಚಾರಣೆಗೆ ಹಾಜರಾಗಲು ನಮಗೆ ನಾಲ್ಕು ವಾರ ಕಾಲಾವಕಾಶ ನೀಡುವಂತೆ ಕೋರಿದ್ದರು. ಅದಕ್ಕೆ ನಾನು ಒಪ್ಪಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.