ಬೆಂಗಳೂರು: ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ನೇರ, ದಿಟ್ಟ ಮಾತುಗಳಿಂದ ಸಮಕಾಲೀನ ವಿದ್ಯಮಾನಗಳಿಗೆ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಾ ನಮ್ಮ ಆತ್ಮ ಸಾಕ್ಷಿಯಂತಿದ್ದ ಹಿರಿಯ ಹೋರಾಟಗಾರ ಎ.ಕೆ.ಸುಬ್ಬಯ್ಯ ಸಾವಿನಿಂದ ವೈಯಕ್ತಿಕವಾಗಿ ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾಡು ಮಾರ್ಗದರ್ಶಕನನ್ನು ಕಳೆದುಕೊಂಡು ಬಡವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಸಂತಾಪ ಸೂಚಿಸಿದ್ದು, ಹಿರಿಯ ರಾಜಕಾರಣಿ, ಮಾಜಿ ಶಾಸಕ, ಸಾಮಾಜಿಕ ಚಿಂತಕ, ಲೇಖಕ, ಪ್ರಗತಿಪರ ಹೋರಾಟಗಾರ ಎ.ಕೆ.ಸುಬ್ಬಯ್ಯ ಅವರ ನಿಧನದ ಸುದ್ದಿ ಆಘಾತ ತಂದಿದೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಅವರ ಕುಟುಂಬದ ನೋವಿನಲ್ಲಿ ನಾವೂ ಭಾಗಿಗಳು ಎಂದು ಟ್ವೀಟ್ ಮಾಡಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರವರು ಟ್ವೀಟ್ ಮಾಡಿ, ಜನಸಂಘದಿಂದ ಬಂದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಂತರ ಹಲವಾರು ಸಮಾಜಮುಖಿ ಹೋರಾಟಗಳಲ್ಲಿ ಭಾಗಿಯಾಗಿರುವ ಎ.ಕೆ.ಸುಬ್ಬಯ್ಯನವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.