ಬೆಂಗಳೂರು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಸೋಲಾರ್ ಬೇಲಿ ಒದಗಿಸಬೇಕು ಮತ್ತು ಮಂಗಗಳಿಗೆ ಪಾರ್ಕ್ ಮಾಡಬೇಕೆಂಬ ಎರಡು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೆವು ಅದೀಗ ಸಾಕಾರವಾಗಿದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಕಾಡುಪ್ರಾಣಿಗಳಿಂದ ಬೇಸಾಯದ ಬದುಕು ಹಾಳಾಗುತ್ತಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ, ಏಲಕ್ಕಿ ಮತ್ತಿತರ ಗಿಡಬಳ್ಳಿ ಸೇರಿದಂತೆ ಸುಮಾರು ಎರಡು ಸಾವಿರ ಕೋಟಿ ರೂ.ನಷ್ಟು ಬೆಳೆಗಳು ಪ್ರಾಣಿಗಳ ಹಾವಳಿಯಿಂದ ಹಾಳಾಗಿದೆ. ಅದರಲ್ಲೂ ವಿಶೇಷವಾಗಿ ಕಾಡುಕೋಣ, ಮಂಗ ಹಾಗೂ ಹಂದಿಗಳು ಸಾಕಷ್ಟು ಹಾನಿಯುಂಟಾಗುತ್ತಿದೆ. ಸದ್ಯ ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ.
ನಿನ್ನೆ ಮಲೆನಾಡು ಭಾಗದ ಜನಪ್ರತಿನಿಧಿಗಳ ಜೊತೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿ ಎಂಬಲ್ಲಿ 100 ಎಕರೆ ಜಾಗದಲ್ಲಿ ಮಂಕಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಒಪ್ಪಿದೆ. ಮಂಗಗಳು ತಪ್ಪಿಸಿಕೊಂಡು ಹೋಗದಂತೆ ಸೋಲಾರ್ ಬೇಲಿ ನಿರ್ಮಾಣ ಮಾಡಬೇಕೆಂದು ಮನವಿ ಮಾಡಲಾಗಿದೆ. ಈ ನಿರ್ಧಾರಕ್ಕೆ ಜಿಲ್ಲೆಯ ಶಾಸಕರು ಹಾಗೂ ಸರ್ಕಾರ ಕೂಡ ಒಪ್ಪಿದೆ. ಈಗಾಗಲೇ ಡಿಸಿ ನಾಗೋಡಿನಲ್ಲಿ ಸ್ಥಳ ಸೂಚಿಸಿದ್ದು, ಹಣವನ್ನು ಸರ್ಕಾರ ನೀಡುತ್ತದೆ ಎಂದು ತಿಳಿದರು.