ಬೆಂಗಳೂರು: ಮನ್ಸೂರ್ ಅಲಿಖಾನ್ ಕುರಿತು ತನಿಖೆ ಕೈಗೊಂಡಿರುವ ಎಸ್ಐಟಿ ತಂಡ ಆತನ ಹಿನ್ನೆಲೆ ಮಾಹಿತಿ ಕಲೆ ಹಾಕಿದ್ದು,ಮನ್ಸೂರ್ ಅಲಿ ಖಾನ್ ಬರೋಬ್ಬರಿ 82 ಬ್ಯಾಂಕ್ ಅಕೌಂಟ್ ಹೊಂದಿದ್ದ ಎಂಬುದು ಈ ವೇಳೆ ಬಯಲಾಗಿದೆ.
ನೂರಾರು ಕೋಟಿ ಬಾಚಿ ಪರಾರಿಯಾಗಿರುವ ಮನ್ಸೂರ್ ಅಲಿಖಾನ್ 13 ವರ್ಷದ ಹಿಂದೆ ದುಬೈನಿಂದ ಬೆಂಗಳೂರಿಗೆ ಬಂದು, 2006ರಲ್ಲಿ ವ್ಯಾಪಾರ ವಹಿವಾಟು ಮಾಡುವ ಕಂಪನಿಯೊಂದನ್ನ ಶುರು ಮಾಡಿದ್ದ.
2008ರಲ್ಲಿ ಆ ಕಂಪನಿ ನಷ್ಟ ಹೊಂದಿದ ಕಾರಣ ಮತ್ತೆ ದುಬೈಗೆ ಹೋಗಿದ್ದ. ದುಬೈನಲ್ಲಿ ಮತ್ತೆ ಹಣ ಮಾಡಿ 2010ರಲ್ಲಿ ಚಿನ್ನದ ಮೇಲೆ ಹಣ ಇನ್ವೆಸ್ಟ್ ಮಾಡಲು ನಿರ್ಧಾರ ಮಾಡಿ ಐಎಂಎ ಜ್ಯುವೆಲ್ಲರಿ ಶಾಪ್ ಸ್ಥಾಪನೆ ಮಾಡಿದ್ದ. ಐಎಂಎ ಅಂದರೆ ಇಸ್ಮಾಯಿಲ್ ಮನ್ಸೂರ್ ಅಹಮದ್ ಖಾನ್. ಇದು ಮನ್ಸೂರ್ ಅಲಿಖಾನ್ ಮತ್ತೋಂದು ಹೆಸರಂತೆ. ಈ ಹೆಸರನ್ನೇ ಇಟ್ಟುಕೊಂಡು ಮೊದಲು ಹಣ ಹೂಡಿಕೆ ಮಾಡುವಂತೆ ಜನರನ್ನ ಪುಸಲಾಯಿಸಿ ಅಧಿಕ ಲಾಭ ನೀಡುವುದಾಗಿ ಹೇಳಿ ಕಂಪನಿ ಪ್ರಚಾರ ಮಾಡಿಸಿದ್ದ. ಹಾಗೆ ಐಎಂಎ ಕಂಪನಿ ಶುರುಮಾಡಿದ ದಿನವೇ ಮನ್ಸೂರ್ಗೆ ಗೊತ್ತಿತ್ತು ಇದು ಹೆಚ್ಚು ದಿನ ಉಳಿಯಲ್ಲ ಎಂದು. ಆದರೆ ಇರೋವಷ್ಟು ದಿನ ದುಡ್ಡು ಮಾಡಿ ಬಿಂದಾಸ್ ಆಗಿ ಜೀವನ ಮಾಡಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಸದ್ಯ, ಸಾವಿರಾರು ಜನರಿಗೆ ಮೋಸಮಾಡಿ ಮನ್ಸೂರ್ ಎಸ್ಕೇಪ್ ಆಗಿದ್ದು,ಇನ್ನು ತನಿಖೆ ವೇಳೆ ಮನ್ಸೂರ್ ಖಾನ್ ಅಸಲಿ ಮುಖವಾಡ ಮತ್ತೊಂದು ಬಯಲಾಗಿದೆ. ಮನ್ಸೂರ್ ವಿವಿಧ ಬ್ಯಾಂಕ್ಗಳಲ್ಲಿ 82 ಬ್ಯಾಂಕ್ ಖಾತೆ ಹೊಂದಿದ್ದು,ಈ ಬ್ಯಾಂಕ್ ಖಾತೆಗಳ ಲಿಸ್ಟ್ನ್ನ ಎಸ್ಐಟಿ ರೆಡಿ ಮಾಡಿದೆ. ಅಕೌಂಟ್ಗಳಲ್ಲಿರುವ ಹಣದ ಮೂಲಗಳ ಮಾಹಿತಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸದ್ಯ ಆರೋಪಿಯ ಪ್ರಾಪರ್ಟಿ ಮೇಲೆ ಎಸ್ಐಟಿ ಕಣ್ಣು ಇಟ್ಟಿದ್ದು,ತನಿಖೆ ಮುಂದುವರೆದಿದೆ.