ಬೆಂಗಳೂರು: ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಕಲ್ಪಿಸಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆಯುವುದರ ಮೂಲಕ ಎಚ್ಚರಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ ತಿಂಗಳಿಂದ ಅಕ್ಟೋಬರ್ವರೆಗೆ ಸುರಿದ ಮಳೆಯಿಂದ ಉಂಟಾದ ಪ್ರವಾಹವು ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳ ಜನರ ಬದುಕನ್ನು ಛಿದ್ರಗೊಳಿಸಿದೆ. ರೈತರು ಬಿತ್ತನೆ ಮಾಡಿದ್ದ ಜಮೀನುಗಳಲ್ಲಿ ಬೆಳೆ ಹಾಳಾಗಿದೆ. ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿ ನಮ್ಮ ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಆದರೆ, ಬೆಳೆದ ಬೆಳೆಗೆ ಬೆಲೆಯಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತವೇ ಸರಿ ಎಂದಿದ್ದಾರೆ.
ದೇಶದ ಆರ್ಥಿಕತೆಯ ಕುಸಿದು ಹೋಗಿರುವುದಕ್ಕೆ ಮುಖ್ಯ ಕಾರಣಗಳನ್ನು ಪಟ್ಟಿ ಮಾಡಿದಾಗ ಕೃಷಿಯನ್ನು ನಿರ್ಲಕ್ಷ್ಯ ಮಾಡಿರುವುದು ಕಂಡು ಬರುತ್ತದೆ. ರೈತ ಬೆಳೆದ ಬೆಳೆ ಮಾಡಿದ ಖರ್ಚು ಸಹ ಪುನಃ ಪಡೆಯಲಾಗದಂತಹ ದುಃಸ್ಥಿತಿಯಲ್ಲಿದ್ದಾರೆ. ಆರ್ಥಿಕತೆ ಹೇಗೆ ಸುಧಾರಿಸುತ್ತದೆ. ಹಳ್ಳಿಗಾಡಿನ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿದ್ದರೆ ಆರ್ಥಿಕತೆ ಸರಿಯಾಗುವುದು ಹೇಗೆ. ಬಿತ್ತನೆ ಬೀಜ, ರಸಗೊಬ್ಬರ, ಔಷಧ ಕಂಪನಿಗಳು, ದಲ್ಲಾಳಿಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಹುನ್ನಾರಗಳು ಮತ್ತು ಆಡಳಿತ ಶಾಹಿ ನಿರ್ಲಕ್ಷ್ಯಗಳ ವಿಷವರ್ತುಲದಲ್ಲಿ ನಮ್ಮ ರೈತಾಪಿ ಸಮುದಾಯ ಸಿಲುಕಿಕೊಂಡು ರೈತ ಸಮುದಾಯ ದುಡಿಯುತ್ತಿದೆ.
ಭತ್ತ, ಜೋಳ, ರಾಗಿ, ತೊಗರಿ, ಶೇಂಗಾ, ಸೋಯಾಬೀನ್ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ. ಈ ಬೆಳೆಗಳಿಗೆ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯ ರೈತ ಮಾಡಿರುವ ಖರ್ಚಿಗೆ ಹೋಲಿಸಿ ನೋಡಿದರೆ ಲಾಭದ ಮಾತೇ ಇಲ್ಲ. ಡಾ. ಸ್ವಾಮಿನಾಥನ್ ವರದಿ ಪ್ರಕಾರ ಖರ್ಚನ್ನು ಕಳೆದು ಶೇ.50 ರಷ್ಟು ಲಾಭಾಂಶವಾದರೆ ರೈತರಿಗೆ ದೊರಕಬೇಕು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಡಾ. ಸ್ವಾಮಿನಾಥನ್ ವರದಿಯನ್ನು ಅನುಷ್ಠಾನ ಮಾಡಿಲ್ಲ. ರಾಜ್ಯ ಸರ್ಕಾರ ಈ ಕೂಡಲೇ ಡಾ. ಸ್ವಾಮಿನಾಥನ್ ವರದಿಯನ್ನು ಅನುಷ್ಠಾನ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಪ್ರವಾಹ ಮತ್ತು ಬರದಿಂದ ನಲುಗಿ ಹೋಗಿರುವ ರೈತರು ಬೆಳೆದ ಇನ್ನಿತರ ಬೆಳೆಗಳಾದ ಕಡಲೆ, ಗೋಧಿ, ಸೂರ್ಯಕಾಂತಿ, ಹೆಸರು, ಜೋಳ, ಹತ್ತಿ, ಉದ್ದು, ಕುಸುಬೆ ಮುಂತಾದವುಗಳನ್ನು ಸಹ ಬೆಂಬಲ ಬೆಲೆ ಯೋಜನೆಯಡಿ ತರದಿರುವುದು ಸಮಂಜಸವಾದ ಕಾರ್ಯವಲ್ಲ. ಆದುದರಿಂದ ಈ ಬೆಳೆಗಳಿಗೆ ಸಮರ್ಪಕವಾದ ಬೆಂಬಲ ಬೆಲೆ ನಿಗದಿಪಡಿಸಿ ತುರ್ತಾಗಿ ಖರೀದಿಸಲು ಒತ್ತಾಯಿಸುತ್ತೇನೆ ಎಂದಿದ್ದಾರೆ.
ರೈತರ ಫಸಲುಗಳು ನವೆಂಬರ್ನಲ್ಲಿ ಕೊಯ್ಲಿಗೆ ಬರುತ್ತವೆ. ದಲ್ಲಾಳಿಗಳ ವಿಷವರ್ತುಲದಲ್ಲಿ ಸಿಲುಕಿಕೊಂಡಿರುವ ರೈತರು ತಮ್ಮ ತುರ್ತು ಹಣದ ಅವಶ್ಯಕತೆಗಳಿಗಾಗಿ ಅಡ್ಡಾದಿಡ್ಡಿ ಬೆಲೆಗೆ ತಮ್ಮ ಬೆಳೆಗಳನ್ನು ಮಾರಿಕೊಳ್ಳುತ್ತಾರೆ. ಇದನ್ನು ತಪ್ಪಿಸಬೇಕಾಗಿದ್ದರೆ ಡಿಸೆಂಬರ್ ತಿಂಗಳ ಹೊತ್ತಿಗೆ ಬೆಂಬಲ ಬೆಲೆಯನ್ನು ಘೋಷಿಸಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಆದರೆ ಜನವರಿ ಅಂತ್ಯದಲ್ಲಿ ಈ ಕುರಿತು ಯೋಚಿಸುತ್ತಿರುವುದು ಸಮರ್ಪಕವೆನಿಸುವುದಿಲ್ಲ. ಆದುದರಿಂದ ಈಗಾಗಲೇ ಬೆಂಬಲ ಬೆಲೆ ಘೋಷಿಸಿರುವ ಬೆಳೆಗಳ ಜೊತೆಗೆ ಕಡಲೆ, ಗೋಧಿ, ಸೂರ್ಯಕಾಂತಿ, ಹೆಸರು, ಜೋಳ, ಹತ್ತಿ, ಉದ್ದು, ಕುಸುಬೆ ಮುಂತಾದ ಬೆಳೆಗಳಿಗೆ ಬೆಂಬಲ ಬೆಲೆ ಯೋಜನೆಯನ್ನು ವಿಸ್ತರಿಸುವ ಮೂಲಕ ರೈತರಿಗೆ ನೆರವಾಗಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.