ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವ್ಯಕ್ತಿತ್ವ ಪರೀಕ್ಷೆಗೆ ನಿಗದಿಪಡಿಸಿರುವ ಅಂಕಗಳನ್ನು ಕಡಿತಗೊಳಿಸುವ ಕುರಿತು ಸರ್ಕಾರ ಸಂವಿಧಾನ ಬಾಹಿರವಾದ ತೀರ್ಮಾನವನ್ನು ತೆಗೆದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸರ್ಕಾರ ಇಂತಹ ನಿರ್ಧಾರವನ್ನು ಹಿಂಪಡೆದು, ಯುಪಿಎಸ್‍ಸಿ ಮಾದರಿಯಲ್ಲಿ ಲಿಖಿತ ಪರೀಕ್ಷೆಯ ಒಟ್ಟು ಅಂಕಗಳ ಶೇ.12.5ರಷ್ಟನ್ನು ನಿಗದಿಪಡಿಸಿ ವ್ಯಕ್ತಿತ್ವ ಪರೀಕ್ಷೆಯನ್ನು ನಡೆಸುವ ಕುರಿತು ಕ್ರಮಕೈಗೊಳ್ಳಬೇಕು. ಈಗಾಗಲೇ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಲೋಕಸೇವಾ ಆಯೋಗವು ಆಯ್ಕೆ ಮಾಡುವಾಗ ‘ಎ’ ಮತ್ತು ‘ಬಿ’ ಶ್ರೇಣಿಯ ಅಧಿಕಾರಿಗಳಿಗೆ ವ್ಯಕ್ತಿತ್ವ ಪರೀಕ್ಷೆ ಮಾಡುವಾಗ ಅಂಕಗಳನ್ನು ಲಿಖಿತ ಪರೀಕ್ಷೆ ಅಂಕಗಳ ಶೇ.2ರಷ್ಟಕ್ಕೆ ಇಳಿಸಿದೆ. ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವು ಕರ್ನಾಟಕದ ಪಾಲಿಗೆ ಅತ್ಯಂತ ಅನಾಹುತಕಾರಿಯಾಗಿದೆ.
ದೇಶದ ಹಲವು ರಾಜ್ಯಗಳು 100 ರಿಂದ 275 ಅಂಕಗಳನ್ನು ವ್ಯಕ್ತಿತ್ವ ಪರೀಕ್ಷೆಗಾಗಿ ನಿಗದಿಪಡಿಸಿವೆ. ಗುಣಮಟ್ಟದ ಆಯ್ಕೆಯ ವಿಚಾರದಲ್ಲಿ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ಕೇಂದ್ರ ಲೋಕ ಸೇವಾ ಆಯೋಗವು 1,750 ಅಂಕಗಳಿಗೆ ಲಿಖಿತ ಪರೀಕ್ಷೆಗೆ ಹಾಗೂ 275 ಅಂಕಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಅಳವಡಿಸಿಕೊಂಡಿದೆ. ವ್ಯಕ್ತಿತ್ವ ಪರೀಕ್ಷೆಗಳಿಗಾಗಿ ಹಲವು ರಾಜ್ಯಗಳು ಭಿನ್ನ ಭಿನ್ನ ಮಾದರಿಗಳನ್ನು ಅಳವಡಿಸಿಕೊಂಡಿವೆ.
ಉದಾಹರಣೆಗೆ ಅಸ್ಸೋಂನಲ್ಲಿ-275, ಪಶ್ಚಿಮ ಬಂಗಾಳ-200, ಬಿಹಾರ-120, ಉತ್ತರಖಾಂಡ-200, ಉತ್ತರಪ್ರದೇಶ-100, ಗುಜರಾತ್-100, ಮಹಾರಾಷ್ಟ್ರ-100, ಮಧ್ಯಪ್ರದೇಶ-175, ಪಂಜಾಬ್-150 ಮತ್ತು ತಮಿಳುನಾಡು ರಾಜ್ಯವು 100 ಅಂಕಗಳನ್ನು ನಿಗದಿಪಡಿಸಿವೆ.
ಯುಪಿಎಸ್ಸಿಯಲ್ಲಿ ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯ ನಡುವಿನ ಅನುಪಾತ ಶೇ.15.71 ರಷ್ಟಿದೆ. ನಮ್ಮ ರಾಜ್ಯದಲ್ಲಿ 200 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ ಇರುತ್ತಿತ್ತು. ಆನಂತರ 2020ರ ಜೂನ್ನಲ್ಲಿ 200 ಅಂಕಗಳ ಬದಲಿಗೆ 50 ಅಂಕಗಳಿಗೆ ಕಡಿತಗೊಳಿಸಲಾಯಿತು. 2020ಕ್ಕಿಂತ ಮೊದಲು 1750 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 200 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ ಇರುತ್ತಿತ್ತು.
ಕಳೆದ ಫೆಬ್ರವರಿ 18ರಂದು ಕೆಪಿಎಸ್‍ಸಿಯ ಜೊತೆ ಸಮಾಲೋಚಿಸದೆ ಏಕಾಏಕಿಯಾಗಿ ಸರ್ವಾಧಿಕಾರಿ ಪ್ರವೃತ್ತಿಯಿಂದ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 25ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗಳ ಅಂಕಗಳ ನಡುವಿನ ಅನುಪಾತ ಶೇ.2ಕ್ಕೆ ಇಳಿಸಿದಂತಾಗಿದೆ ಎಂದಿದ್ದಾರೆ.
ಇನ್ನು ವ್ಯಕ್ತಿತ್ವ ಪರೀಕ್ಷೆಗಳಲ್ಲಿ ಲೋಪದೋಷಗಳಿಲ್ಲವೆಂದಲ್ಲ, ವ್ಯಕ್ತಿತ್ವ ಪರೀಕ್ಷೆ ಅಥವಾ ಸಂದರ್ಶನಗಳಿಗೆ ನಿಗದಿಪಡಿಸಿದ ಅಂಕಗಳಿಗೆ ಸಂಬಂಧಪಟ್ಟಂತೆ ಹಲವಾರು ಆರೋಪಗಳಿವೆ. ಹಾಗಾಗಿಯೇ, ನಮ್ಮ ಸರ್ಕಾರದ ಅವಧಿಯಲ್ಲಿ ಪಿ.ಸಿ. ಹೋಟಾರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಪಾರದರ್ಶಕತೆಯನ್ನು ತರಲು ಪ್ರಯತ್ನಿಸಿದ್ದೆವು.
ಪಿ.ಸಿ.ಹೋಟಾ ಸಮಿತಿಯ ಹಲವು ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಿದ ನಂತರ ಭ್ರಷ್ಟಾಚಾರದ ಆರೋಪಗಳು ಬಹುತೇಕ ಕಡಿಮೆಯಾಗಿವೆ. ಹಾಗಾಗಿ, ಯುಪಿಎಸ್‍ಸಿಯ ಮಾದರಿಯಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಂಡು ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಸಂದರ್ಶನಗಳನ್ನು ನಡೆಸಬೇಕಾಗಿದೆಯೇ ಹೊರತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನೇ ಕಡಿಮೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಕಾರ್ಯಾಂಗಕ್ಕೆ ಮಾನವೀಯ ಮತ್ತು ಸಮರ್ಥ ಅಧಿಕಾರಿಗಳು ಇಲ್ಲದೇ ಹೋಗುತ್ತದೆ. ಇದರ ದುಷ್ಪರಿಣಾಮ ರಾಜ್ಯದ ಮುಂದಿನ ಭವಿಷ್ಯದ ಮೇಲೆ ಆಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬಜೆಟ್ ಅಧಿವೇಶನದಲ್ಲಿಯೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಬೇಕು: ಬಸವ ಜಯಮೃತ್ಯುಂಜಯ ಸ್ವಾಮೀಜಿ