ಬೆಂಗಳೂರು : ಮೈತ್ರಿ ಸರ್ಕಾರ ಬೀಳಲು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂಬುದನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ಮುಖಂಡರು, ಪದಾಧಿಕಾರಿಗಳ ಸಭೆಯಲ್ಲಿ ಮೈತ್ರಿ ಸರ್ಕಾರದ ಪತನದ ಬಗ್ಗೆ ಗೌಡರು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಮೊದಲಿಂದಲೂ ತಿಕ್ಕಾಟ ಇತ್ತು. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಹೇಳಿದ್ದಕ್ಕೆ ಕುಮಾರಸ್ವಾಮಿ ಸಿಎಂ ಆದರು. ಆದರೆ ಇಲ್ಲಿ ಸಿದ್ದರಾಮಯ್ಯನವರಿಗೆ ಮನಸ್ಸಿರಲಿಲ್ಲ. ಅವರ ಆಪ್ತರೇ ಈ ವಿಚಾರವನ್ನು ಹೇಳಿದ್ದಾರೆ. ಕುಮಾರಸ್ವಾಮಿ ಅವರಿಗೆ ನಿತ್ಯ ಕಿರಿಕಿರಿ ಇತ್ತು. ಅದರಿಂದ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ’ ಎಂದು ಸಭೆಯಲ್ಲಿ ಪದಾಧಿಕಾರಿಗಳ ಮುಂದೆ ಮೈತ್ರಿ ಸರ್ಕಾರದ ಪತನದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
‘ಮುಂಬೈಗೆ ತೆರಳಿದ್ದ ಸಿದ್ದರಾಮಯ್ಯನವರ ಬೆಂಬಲಿಗರಿಂದ ಮೈತ್ರಿ ಸರ್ಕಾರ ಪತನವಾಯಿತು. ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಊಹಿಸಬಹುದು. ಮುಂಬೈಗೆ ಹೋದವರೆ ಹೇಳಿದ್ದಾರೆ. ಸರ್ಕಾರವನ್ನು ಪತನಗೊಳಿಸಲು ನಮ್ಮ ಪಕ್ಷದ ಮುಖಂಡರೇ ತಿಳಿಸಿದ್ದಾರೆ ಎಂದು ಯಾವುದೂ ರಹಸ್ಯವಾಗಿ ಉಳಿದಿಲ್ಲ ಎಂದಿರುವ ಗೌಡರು, ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಸಂಘಟನೆ ಮಾಡಲು ಎಲ್ಲರೂ ಸಹಕಾರ ನೀಡಬೇಕು. ಕಳೆದ ಲೋಕಸಭೆ ಚುನಾವಣೆಯ ಹಿನ್ನಡೆಗೆ ಮೈತ್ರಿ ಸರ್ಕಾರವೇ ಕಾರಣ ಎಂಬ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತಾವು ಸೋಲಲು ಕಾರಣ ಯಾರೆಂಬುದು ಗೊತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ ಎಂಟು ಶಾಸಕರನ್ನು ಕರೆದುಕೊಂಡು ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸಿರುವ ವಿಚಾರವೂ ಗೊತ್ತಿದೆ. ಹಾಗಾಗಿ, ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷ ಹೋರಾಟ ಮಾಡಬೇಕಿದೆ. ಮುಂದಿನ ಚುನಾವಣೆ ಒಳಗಾಗಿ ಪಕ್ಷ ಮತ್ತಷ್ಟು ಸಂಘಟಿಸಬೇಕಿರುವುದರಿಂದ ಸಹಕಾರ ನೀಡುವಂತೆ ಸಭೆಯಲ್ಲಿ ಗೌಡರು ಮನವಿ ಮಾಡಿದ್ದಾರೆ.