ಬೆಂಗಳೂರು: ರಾಜ್ಯದ ವಿಧಾನಪರಿಷತ್ನಲ್ಲಿ ಬಿಜೆಪಿ ಸಚಿವರು ಮತ್ತು ಸದಸ್ಯರಿಂದ ನಡೆದಿರುವ ಗೂಂಡಾಗಿರಿ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ. ಇದು ಖಂಡಿತ ಸಾಂವಿಧಾನಿಕ ಪ್ರಜಾಪ್ರಭುತ್ವ ಅಲ್ಲ, ಇದು ನರೇಂದ್ರ ಮೋದಿ ಪ್ರಜಾಪ್ರಭುತ್ವ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಪರಿಷತ್ ನಲ್ಲಿ ಇವತ್ತು ನಡೆದ ಸನ್ನಿವೇಶ ಪ್ರಜಾಪ್ರಭುತ್ವದ ಕಗ್ಗೊಲೆ, ಸಂವಿಧಾನ ವಿರೋಧಿ ನಡೆ ಎಂದು ಬಿಜೆಪಿ ಹಾಗೂ ಜೆಡಿಎಸ್ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
165 ರೂಲ್ಸ್ ಹೀಗೆ ಮಾಡಿ ಅಂತ ಹೇಳುತ್ತಾ?. ಬಿಜೆಪಿಯ ಗೂಂಡಾಗಿರಿಯನ್ನು ಖಂಡಿಸುತ್ತೇನೆ. ರಾಜ್ಯದ ಇತಿಹಾಸದಲ್ಲೇ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗೂಂಡಾಗಿರಿಯನ್ನು ನೋಡಿಲ್ಲ. ಇದನ್ನು ನಾನು ಖಂಡಿಸುತ್ತೇನೆ. ಬಾಗಿಲು ಹಾಕಿ ಸಭಾಪತಿ ಅವರನ್ನು ತಡೆದಿದ್ದಾರೆ. ಇದು ಕಾನೂನು ಬಾಹಿರವಾದುದು ಎಂದು ಕಿಡಿಕಾರಿದರು.
ಸದನದ ಗೂಂಡಾಗಿರಿಗೆ ಜೆಡಿಎಸ್ ಕೂಡ ಕಾರಣ
ಸಭಾಪತಿಯನ್ನೇ ಸದನದೊಳಗೆ ಬರದಂತೆ ತಡೆದಿದ್ದು ನಿಯಮಬಾಹಿರ. ಸಭಾಪತಿ ಇದ್ದಾಗ ಉಪಸಭಾಪತಿ ಕೂರುವಂತಿಲ್ಲ. ಅವರಿಗೆ ಏನಾದರೂ ಸಮಸ್ಯೆ ಇದ್ದಾಗ ಇಲ್ಲವೇ ಸಭಾಪತಿ ಹೇಳಿದಾಗ ಮಾತ್ರ ಉಪಸಭಾಪತಿ ಕೂರುವ ಅವಕಾಶವಿದೆ. ಈಗ ನಡೆದಿರುವುದು ಸಂಪೂರ್ಣ ಕಾನೂನು ಉಲ್ಲಂಘನೆ. ಬಿಜೆಪಿಗೆ ಬಹುಮತ ಇಲ್ಲ. ಜೆಡಿಎಸ್ ಬೆಂಬಲದಿಂದ ಈಗ ಬಂದಿದ್ದಾರೆ. ಸದನದ ಗೂಂಡಾಗಿರಿಗೆ ಜೆಡಿಎಸ್ ಕೂಡ ಕಾರಣ ಎಂದು ಆರೋಪಿಸಿದರು.
ಸಭಾಪತಿ ಅವರನ್ನು ಒಳಗೆ ಬರಲು ಬಿಡಲಿಲ್ಲ. ಇದು ಕ್ರಿಮಿನಲ್ ಕೇಸ್ ಆಗುತ್ತದೆ. ಸಭೆಯಲ್ಲಿ ನಡೆದ ಗೂಂಡಾಗಿರಿನಲ್ಲಿ ಜೆಡಿಎಸ್ ಕೂಡ ಭಾಗಿಯಾಗಿದೆ. ಇಬ್ಬರೂ ಸೇರಿಕೊಂಡು ಗುಂಡಾಗಿರಿ ಮಾಡಿದ್ದಾರೆ. ಕಾಂಗ್ರೆಸ್ ನವರು ಎಲ್ಲಿ ಗೂಂಡಾಗಿರಿ ಮಾಡಿದ್ದಾರೆ. ಉಪಸಭಾಪತಿ ಕೂತಿದ್ದೇ ಮಹಾಪರಾಧ. ಇವರು ಉಪಸಭಾಪತಿ ಅವರನ್ನು ಕೂರಿಸಿದ್ದೇ ಕಾನೂನುಬಾಹಿರ. ಇನ್ನು ಬಾಗಿಲುಮುಚ್ಚಿ ಕೂರಿಸಿದ್ದು ಸರಿಯೇ? ಎಂದು ಪ್ರಶ್ನಿಸಿದರು.
ಓದಿ: ಪರಿಷತ್ ದಾಂಧಲೆಯಲ್ಲಿ ಡಿಸಿಎಂಗಳು, ಹಿರಿಯ ಸಚಿವರು ಮೂಕ ಪ್ರೇಕ್ಷಕರು.. ಸದನಕ್ಕೂ ಮೊದಲೇ ಗುಂಪು ಸೇರಿದ್ಯಾಕೆ?
ಸಭಾಪತಿ ಅವರು ವಿದೇಶಕ್ಕೆ ಹೋದಾಗ, ಅನಾರೋಗ್ಯ ಇದ್ದಾಗ ಮಾತ್ರ ನನ್ನ ಗೈರು ಹಾಜರಿಯಲ್ಲಿ ಕೆಲಸ ಮಾಡಿ ಎಂದು ಉಪ ಸಭಾಪತಿ ಅವರಿಗೆ ಹೇಳುತ್ತಾರೆ. ರೂಲ್ಸ್ ಪುಸ್ತಕ ಸಹ ಮಾಡಿಕೊಂಡಿದ್ದೇವೆ. ರೂಲ್ಸ್ ಕಮಿಟಿ ರೂಲ್ಸ್ ಮಾಡಲಾಗಿದೆ. ಈ ನಿಯಮಾವಳಿ ಚೌಕಟ್ಟಿನಲ್ಲಿ ಸಭಾಪತಿ ಅವರು ಸದನ ನಡೆಸುತ್ತಾರೆ. ಡಿ. 10 ರಂದು ಸಭಾಪತಿ ಅವರು ಸದನ ನಡೆಸಿದ್ದಾರೆ. ಕಾನೂನು ಸಚಿವರ ಆದೇಶದ ಮೇರೆಗೆ ಕೌನ್ಸಿಲ್ ಸಭೆ ಕರೆದು ಆ ಪತ್ರದಲ್ಲಿ ಚಿಕ್ಕ ಚರ್ಚೆ ಮಾಡಿ ಆ ಮೂಲಕ ನೋ ಕಾನ್ಫರೆನ್ಸ್ ಮೋಷನ್ ಚಾಲನೆ ಮಾಡುತ್ತಾರೆ. ಆದರೆ ಈ ರೀತಿ ಮಾಡದೆ ಡಿ. 15 ರಂದು ಮೇಲ್ಮನೆ ಕಲಾಪ ನಡೆಸಿ ಎಂದು ಇದೆ. ಆದರೆ, ನಿಯಮದ ಪ್ರಕಾರ ಇಲ್ಲ ಎಂದು ಹೇಳಿದರು.
ನೋಟಿಸ್ ನೀಡಿದ 14 ದಿನ ಆದ ನಂತರ 5 ದಿನಗಳ ಒಳಗೆ ಅವಿಶ್ವಾಸ ನಿರ್ಣಯ ಮಾಡಬೇಕು ಎಂದು ಇದೆ. ಆದರೆ ಎಲ್ಲಿ ಮಾಡಿದ್ದಾರೆ? ಇದನ್ನೆಲ್ಲಾ ಕೌಲ್ ಅಂಡ್ ಸೆಕ್ಟರ್ ಅವರ ಪ್ರಕಾರ ಕಾರಣಗಳನ್ನು ಅಟ್ಯಾಚ್ ಮಾಡಬೇಕು. ಆದರೆ, ಯಾವುದನ್ನು ಅಟ್ಯಾಚ್ ಮಾಡಿಲ್ಲ, ಅದಕ್ಕೆ ಆರ್ಡರ್ ಪ್ರಕಾರ ಇಲ್ಲ ಅಂತ ತಿರಸ್ಕಾರ ಮಾಡಿದ್ದಾರೆ. ಸಭಾಪತಿ ಬರುವುದಕ್ಕೆ ಮುಂಚೆ ಬೆಲ್ ಆಗುತ್ತದೆ. ಆ ನಂತರ ಮಾರ್ಷಲ್ ಸಭಾಪತಿ ಬಂದರು ಅಂತ ಹೇಳುತ್ತಾರೆ. ಆ ನಂತರ ಅವರು ಬರುತ್ತಾರೆ. ಆದರೆ ಇದನ್ನು ಅವರು ಪಾಲನೆ ಮಾಡಿಲ್ಲ. ಸಭಾಪತಿ ಬರುವ ಬಾಗಿಲನ್ನು ಚಿಲಕ ಹಾಕಿಸಿದ್ದಾರೆ. ಸಭಾಪತಿ ಬರುವುದಕ್ಕೆ ಬಿಟ್ಟಿಲ್ಲ. ಬೆಲ್ ಆಗುವಾಗ ಉಪಸಭಾಪತಿ ಕೂರಿಸಿದ್ದಾರೆ. ಇದು ಪ್ರಜಾಪ್ರಭುತ್ವನಾ? ಎಂದು ಪ್ರಶ್ನಿಸಿದರು.
ತಮ್ಮ ಪಕ್ಷದ ಸದಸ್ಯರನ್ನು ಗೂಂಡಾಗಿರಿಗೆ ಪ್ರಚೋದಿಸುತ್ತಾರೆ
ಇದು ಅಸಂವಿಧಾನಿಕ, ಕಾನೂನಿಗೆ ವಿರುದ್ಧವಾದದ್ದು ಎಂದು ಗುಡುಗಿದ ಅವರು, ಇದು ಕಾನೂನು ಸಚಿವ ಜೆ.ಮಾಧುಸ್ವಾಮಿ ಫ್ಲಾನ್. ರಾತ್ರಿಯೇ ಇಂತಹ ಫ್ಲಾನ್ ಮಾಡಿದ್ದಾರೆ ಎಂದು ದೂರಿದರು. ರಾಜ್ಯದ ಸಚಿವರಾದ ಡಾ.ಅಶ್ವತ್ಥ್ ನಾರಾಯಣ್ ಅವರು ಖುದ್ದಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಯವರನ್ನು ಅಕ್ರಮವಾಗಿ ಕೂರಿಸ್ತಾರೆ. ಕಾನೂನು ಸಚಿವ ಮಾಧುಸ್ವಾಮಿ ಅವರು ಸದನದಲ್ಲಿ ಮಾರ್ಷಲ್ ಗಳಿಗೆ ಧಮಕಿ ಹಾಕ್ತಾರೆ. ಇಬ್ಬರೂ ತಮ್ಮ ಪಕ್ಷದ ಸದಸ್ಯರನ್ನು ಗೂಂಡಾಗಿರಿಗೆ ಪ್ರಚೋದಿಸುತ್ತಾರೆ. ಇವರು ಸಚಿವರಾಗಲು ಅರ್ಹರೇ? ಎಂದು ಕಿಡಿಕಾರಿದರು.
ರಾಜ್ಯಪಾಲರು ವಿಧಾನಪರಿಷತ್ ನಲ್ಲಿ ನಡೆದ ಘಟನಾವಳಿಗಳನ್ನು ನಿಷ್ಪಕ್ಷಪಾತದಿಂದ, ಸಂಸದೀಯ ಪ್ರಜಾಪ್ರಭುತ್ವದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.