ಬೆಂಗಳೂರು: ಮರಾಠ ಪ್ರಾಧಿಕಾರ ರಚನೆ ಒಂದು ಪಕ್ಕಾ ಓಲೈಕೆ ರಾಜಕಾರಣ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಸವಕಲ್ಯಾಣ ಚುನಾವಣೆಯ ದೃಷ್ಟಿಯಿಂದ ಈ ಕೆಲಸ ಮಾಡಿದ್ದಾರೆ. ಚುನಾವಣೆ ಗೆಲ್ಲುವ ಉದ್ದೇಶಕ್ಕೆ ಬಿಜೆಪಿ ಈ ಕಾರ್ಯ ಮಾಡಿದೆ ಎಂದಿದ್ದಾರೆ.
ಮರಾಠಾ ಪ್ರಾಧಿಕಾರ ಮಾಡಿದ್ದಕ್ಕೆ ನನ್ನ ವಿರೋಧ ಇಲ್ಲ. ಲಿಂಗಾಯತ ಸಮುದಾಯಕ್ಕೂ ಮಾಡಿದ್ರಾ..!? ಬೇರೆ ಸಮುದಾಯಗಳಿಗೂ ಮಾಡಬೇಕಲ್ಲವಾ..!?ಬಡತನದಲ್ಲಿ ಇರುವ ಸಮುದಾಯಗಳು ಬಹಳಷ್ಟು ಇವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಬಹಳಷ್ಟು ಸಮುದಾಯಗಳಿಗೂ ಪ್ರಾಧಿಕಾರ ಮಾಡಬೇಕು. ಇದು ಓಲೈಕೆಯ ರಾಜಕಾರಣ, ಬಸವಕಲ್ಯಾಣದಲ್ಲಿ ಮರಾಠ ಮತಗಳು 25 ರಿಂದ 30 ಸಾವಿರ ಮತಗಳು ಇವೆ. ಹಾಗಾಗಿ, ಅವರನ್ನು ಓಲೈಸಲು ಮಾಡಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಬಿಜೆಪಿಯ ಬಿ ಟೀಮ್: ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಲ್ಲಿ ಹೊಂದಾಣಿಕೆ ವಿಚಾರ ಜೆಡಿಎಸ್ ಕುರಿತು ವ್ಯಂಗ್ಯವಾಗಿ ಮಾತನಾಡಿ, ಅವರು ಮೊದಲಿನಿಂದಲೂ ಹೊಂದಾಣಿಕೆ ಮಾಡಿಕೊಂಡು ಬಂದವರು. ಅಧಿಕಾರ ಎಲ್ಲಿ ಇರುತ್ತೋ ಅಲ್ಲಿ ಅವರು ಇರುತ್ತಾರೆ. ಅವಕಾಶವಾದಿ ರಾಜಕೀಯವನ್ನ ಜೆಡಿಎಸ್ ಮಾಡುತ್ತೆ. ಅದಕ್ಕೆ ಕಳೆದ ಬಾರಿ ಅಸೆಂಬ್ಲಿಯಲ್ಲಿ ನಾನು ಬಿಜೆಪಿಯ ಬಿ ಟೀಂ ಎಂದು ಕರೆದಿದ್ದು ಎಂದು ವಿವರಿಸಿದರು.
ಬಿಜೆಪಿ, ಜೆಡಿಎಸ್ ಮೊದಲಿನಿಂದಲೂ ಒಳ ಒಪ್ಪಂದದಲ್ಲಿ ಇದ್ದರು. ಕಳೆದ ಚುನಾವಣೆಯಲ್ಲೂ ಒಳ ಒಪ್ಪಂದ, ಉಪ ಚುನಾವಣೆಯಲ್ಲೂ ಒಳ ಒಪ್ಪಂದ ಮಾಡಿಕೊಂಡಿದ್ರು. ಜೆಡಿಎಸ್ನದ್ದು ಅವಕಾಶವಾದಿ ರಾಜಕಾರಣ. ಅದಕ್ಕಾಗಿಯೇ ಮಂಡ್ಯದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಒಪ್ಪಂದ ಮಾಡಿಕೊಂಡಿರುವುದು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.