ಬೆಂಗಳೂರು: ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಭೇಟಿ ನೀಡಿ ವಿವಿಧ ವಿಚಾರವಾಗಿ ಚರ್ಚಿಸಿದರು.
ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್, ಕೆಜೆ ಜಾರ್ಜ್, ಆರ್. ಶಂಕರ್ ಮತ್ತು ಶಾಸಕ ಕೆ.ಎನ್. ಸುಬ್ಬಾರೆಡ್ಡಿ ಭೇಟಿ ಕೊಟ್ಟು ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾಲೋಚಿಸಿದರು.
ಭೇಟಿ ನಂತರ ನೂತನ ಸಚಿವ ಆರ್.ಶಂಕರ್ ಮಾತನಾಡಿ, ಖಾತೆ ಹಂಚಿಕೆ ವಿಳಂಬಕ್ಕೆ ಬೇಸರವಾಗಿದೆ. ಸಿಎಂ ಬೆಂಗಳೂರಿಗೆ ಬಂದ ಬಳಿಕ ಖಾತೆ ಹಂಚಿಕೆ ಫೈನಲ್ ಮಾಡ್ತಾರೆ. ನನ್ನದೇನು ಸಮಸ್ಯೆಯಿಲ್ಲ, ಕಾಂಗ್ರೆಸ್ ಪಕ್ಷದಲ್ಲಿರುವ ಖಾತೆಯೇ ಕೊಡಬಹುದು. ಆದರೆ ನಾಗೇಶ್ಗೆ ಜೆಡಿಎಸ್ನಿಂದ ಕೊಡಬೇಕಿದೆ. ಹೀಗಾಗಿ ವಿಳಂಬ ಆಗುತ್ತಿರಬಹುದು ಎಂದರು.
ಸಿದ್ದರಾಮಯ್ಯನವರನ್ನೂ ಭೇಟಿ ಮಾಡಿ ಮಾತನಾಡಿದ್ದೇನೆ. ನಾಗೇಶ್ ಅವರದ್ದು ಹಂಚಿಕೆಯಾದ ಮೇಲೆ ಇಬ್ಬರಿಗೂ ಕೊಡ್ತಾರೆ. ನೊಡೋಣ ಸಿಎಂ ಅವರು ಬಂದ ಮೇಲೆ ಗೊತ್ತಾಗಲಿದೆ. ಆದರೆ ವಿಳಂಬದ ಬಗ್ಗೆ ನನಗೂ ಸ್ವಲ್ಪ ಬೇಸರವಿದೆ ಎಂದರು.
ಇದಕ್ಕೂ ಮುನ್ನ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಚಿವರಾದ ಪಿ.ಟಿ.ಪರಮೇಶ್ವರ್ ನಾಯ್ಕ್, ಜಾರ್ಜ್ ಅವರು ಮಧ್ಯಂತರ ಚುನಾವಣೆ ಎಂಬ ಹೇಳಿಕೆ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾತಿನ ಬಗ್ಗೆ ಚರ್ಚಿಸಿದರು. ಇದಾದ ಬಳಿಕ ಶಾಸಕ ಶರಣಬಸಪ್ಪ ದರ್ಶನಾಪೂರ, ಬಾಗೆಪಲ್ಲಿ ಶಾಸಕ ಸುಬ್ಬಾರೆಡ್ಡಿ ಭೇಟಿ ಕೊಟ್ಟು ಸಮಾಲೋಚಿಸಿದರು.