ಬೆಂಗಳೂರು: ರಾಜ್ಯದ ಬಗ್ಗೆ ಕಾಳಜಿ ಇರುವವರೆಲ್ಲ ಪಕ್ಷಾತೀತವಾಗಿ, ಜಾತಿ, ಧರ್ಮಗಳನ್ನು ಮೀರಿ ನಾಡಿನ ಹಿತ ಬಯಸಬೇಕೆಂದು ವಿನಂತಿಸುತ್ತೇನೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಒಂದು ಕಾಲದಲ್ಲಿ ನರ್ಮದಾ ನದಿಯವರೆಗೆ ವ್ಯಾಪಿಸಿದ್ದ ಕನ್ನಡ ನಾಡು ಕುಗ್ಗಿ ಕುಗ್ಗಿ ಇವತ್ತಿನ ಮಟ್ಟಕ್ಕೆ ಬಂದು ತಲುಪಿದೆ. ಕನ್ನಡದ ಪ್ರಾಚೀನ ಕೃತಿ ಕವಿರಾಜ ಮಾರ್ಗ ಕೃತಿಯಲ್ಲಿ ಗೋದಾವರಿ ನದಿಯವರೆಗೆ ಕನ್ನಡ ನಾಡು ವ್ಯಾಪಿಸಿ ಕೊಂಡಿತ್ತು ಎಂಬ ಉಲ್ಲೇಖವಿದೆ. ಹೀಗಿದ್ದ ನಾಡನ್ನು ಬ್ರಿಟಿಷರು ಹರಿದು ಹಂಚಿ ಹಾಕಿದ್ದರು. ನಮ್ಮ ಹಿರಿಯರು ಜಾತಿ, ಧರ್ಮಗಳನ್ನು ಮೀರಿ ತ್ಯಾಗ ಬಲಿದಾನಗಳ ಮೂಲಕ ನಾಡು ಏಕೀಕೃತವಾಗಲು ಕಾರಣವಾದರು. ಭಾವನಾತ್ಮಕವಾಗಿ, ಆಡಳಿತಾತ್ಮಕವಾಗಿ ಒಗ್ಗೂಡಲು ಕಾರಣವಾದರು. ನಾಡಿಗಾಗಿ ಪ್ರಾಣವನ್ನು, ಬದುಕನ್ನು ತ್ಯಾಗ ಮಾಡಿದ ಎಲ್ಲ ಹಿರಿಯರನ್ನು ಹೃದಯದಾಳದಿಂದ ಸ್ಮರಿಸುತ್ತೇನೆ ಎಂದಿದ್ದಾರೆ.
ಒಂದು ಮಟ್ಟಿಗೆ ಮಾತ್ರ ಇಂದು ನಾವು ಒಗ್ಗೂಡಿದ್ದೇವೆ. ದೇಶದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಜ್ಞಾನಸೃಷ್ಟಿಯಲ್ಲಿ ಸಮಾನ ರಾಜ್ಯಗಳ ಜೊತೆ ತಲೆ ಎತ್ತಿ ಬದುಕುವಂಥ ಸ್ಥಿತಿಗೆ ತಲುಪಿದ್ದೆವು. ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ನೆನಪಿಸಿಕೊಂಡು, ಕನ್ನಡಕ್ಕೆ ಇಂದು ಏನಾಗಿದೆ ಎಂದು ತುಸು ದೀರ್ಘವಾಗಿ ಪ್ರಸ್ತಾಪಿಸುತ್ತೇನೆ ಎಂದು ಸುದೀರ್ಘ ಪ್ರಕಟಣೆಯಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ.
ಸಿದ್ದರಾಮಯ್ಯ ವಿವರಣೆ
ನಮ್ಮ ರಾಜ್ಯವೂ 1956 ರಲ್ಲಿ ಅಧಿಕೃತವಾಗಿ ಏಕೀಕೃತಗೊಂಡು ರಚನೆಯಾಗಿದೆ. ಇವತ್ತಿಗೂ ಕೂಡ ನಾವು ದೇಶ ಮತ್ತು ರಾಜ್ಯಗಳ ವಿಚಾರ ಬಂದಾಗ ಕರ್ನಾಟಕತ್ವವನ್ನು ಭಾರತೀಯತ್ವದ ಎದುರಾಳಿ ಎಂದು ನೋಡುತ್ತಿಲ್ಲ. ಭಾರತಾಂಬೆಯ ಮಗಳು ಕನ್ನಡಮ್ಮ ಎಂಬ ಆಪ್ತ ಭಾವನೆಯೇ ನಮಗೆ ರೋಮಾಂಚಕವಾದ ಸಂಗತಿಯಾಗಿದೆ.
ನಿಧಾನಕ್ಕೆ ಒಕ್ಕೂಟ ವ್ಯವಸ್ಥೆಯು ಕೇಂದ್ರೀಕೃತ ವ್ಯವಸ್ಥೆಯಾಗಲು ಪ್ರಾರಂಭವಾಗಿದೆ. ಹೀಗಾಗುವುದರ ವಿರುದ್ಧ ಹಲವು ಆಯೋಗಗಳು ವರದಿ ಸಲ್ಲಿಸಿವೆ. ಕೇಂದ್ರ ರಾಜ್ಯ ಸಂಬಂಧಗಳ ಕುರಿತು ನ್ಯಾಯಾಲಯಗಳು ತೀರ್ಪು ನೀಡಿವೆ. ಧುರೀಣರು ಧ್ವನಿ ಎತ್ತಿದ್ದಾರೆ. ಆದರೆ, ಇನ್ನಷ್ಟು ಮತ್ತಷ್ಟು ಕೇಂದ್ರೀಕರಣ ಆಗುತ್ತಲೇ ಇದೆ. ರಾಜ್ಯಗಳು ದುರ್ಬಲವಾಗುತ್ತಿವೆ. ಇದು ಒಳ್ಳೆಯ ಸೂಚನೆ ಅಲ್ಲ. ಅದರಲ್ಲೂ ಕರ್ನಾಟಕ ರಾಜ್ಯವು ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ನೀತಿಗಳಿಂದ ದಿನೇ ದಿನೇ ಸೊರಗುತ್ತಿರುವುದು ಅತ್ಯಂತ ಆತಂಕಕಾರಿಯಾದ ಸಂಗತಿಯಾಗಿದೆ.
ನಾಡಿನಲ್ಲಿ ಪ್ರಜ್ಞೆ ಇರುವವರೆಲ್ಲರೂ ಈ ಕುರಿತು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಕೇಂದ್ರದ ದೊಡ್ಡಣ್ಣನಂತಹ ನೀತಿಗಳ ವಿರುದ್ಧ ಧ್ವನಿ ಎತ್ತಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ ಜಿಎಸ್ಟಿ ಪಾಲು ನೀಡಿಕೆಯಲ್ಲಿ ಆಗಿರುವ ಅನ್ಯಾಯ, ನೆರೆ ಹಾಗೂ ಬರ ಸಂದರ್ಭದಲ್ಲಿ ಪರಿಹಾರ ನೀಡುವಲ್ಲಿ ಆಗಿರುವ ತಾರತಮ್ಯ ಇತ್ಯಾದಿ ವಿಚಾರವನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಈ ಸಂದರ್ಭದಲ್ಲಿ ನಾವು ಧ್ವನಿ ಎತ್ತದೇ ಹೋದರೆ ರಾಜ್ಯವು ಕೆಲವರ ಕಪಿಮುಷ್ಠಿಗೆ ಸಿಲುಕಿ ಶಾಶ್ವತ ಗುಲಾಮಗಿರಿಯತ್ತ ಸಾಗಿ ಬಿಡಬಹುದೆಂಬ ಆತಂಕ ನನ್ನದು ಎಂದಿದ್ದಾರೆ.
ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ಅನ್ಯ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಗಳ ಕುರಿತು ಹಾಗೂ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಅಂಕಿ-ಅಂಶ ಸಮೇತ ವಿವರಣೆ ನೀಡಿದ್ದಾರೆ.