ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣ ಹಿನ್ನೆಲೆಯಲ್ಲಿ ಪ್ರತ್ಯೇಕ ಕೊರೊನಾ ಬಜೆಟ್ ಮಂಡನೆ ಮಾಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಇಂದು ತಮ್ಮ ನಿವಾಸದಲ್ಲಿ ಅಭಿನಂದಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತ್ಯೇಕ ಕೊರೊನಾ ಬಜೆಟ್ ಮಂಡಿಸಿದ್ದಾರೆ. ಅದೇ ರೀತಿ ದೆಶದಲ್ಲೂ ಸಹ ಪ್ರತ್ಯೇಕ ಬಜೆಟ್ ಮಂಡಿಸಿ ಎಲ್ಲಾ ರಾಜ್ಯಗಳಿಗೂ ಇದನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಕೊರೊನಾ ವೈರಸ್ ಬಗ್ಗೆ ಕೇಂದ್ರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ರೋಗ ನಿಯಂತ್ರಣಕ್ಕೆ ಸರಿಯಾಗಿ ಕ್ರಮತೆಗೆದುಕೊಂಡಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಹೊರಗಿನಿಂದ ಬಂದವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆಯೇ ಹೊರತು, ಸ್ಥಳೀಯರಿಗೆ ಯಾರಿಗೂ ಬಂದಿಲ್ಲ. ಹೀಗಾಗಿ ಮಾಧ್ಯಮಗಳು ವಾಸ್ತವವನ್ನು ತೋರಿಸಬೇಕು. ಈಗಾಗಲೇ ಜನ ಭಯಗೊಂಡಿದ್ದಾರೆ. ಹೀಗಾಗಿ ಇನ್ನಷ್ಟು ಆತಂಕ ಸೃಷ್ಟಿಸಬಾರದು ಎಂದು ಹೇಳಿದರು.
ಇದೇ ವೇಳೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಸರ್ಕಾರಕ್ಕೆ ನಮ್ಮ ಸಹಕಾರ ಇದೆ. ಜನರನ್ನು ಭಯಬೀಳಿಸುವ ಕೆಲಸ ಆಗಬಾರದು. ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಮೊಬೈಲ್‌ನಲ್ಲಿ ರಿಂಗ್ ಟೋನ್ ಹಾಕಲಾಗಿದೆ. ಅದು ಕರೆ ಮಾಡುವವರಿಗೆ ಕಿರಿಕಿರಿ ಉಂಟು ಮಾಡುವ ರೀತಿ ಇದೆ. ದಿನದಲ್ಲಿ ಒಂದೆರಡು ಬಾರಿ ಈ ರಿಂಗ್ ಟೋನ್ ಹಾಕಿದರೆ ಸಾಕು. ಅದು ಕರೆ ಮಾಡಿದ ಪ್ರತೀ ಸಾರಿಯೂ ಬರುವುದರಿಂದ ಜನ ಮತ್ತಷ್ಟು ಗಾಬರಿಗೊಳ್ಳುತ್ತಾರೆ ಎಂದರು. ಜೊತೆಗೆ ಸಿದ್ದರಾಮಯ್ಯನವರು ಹೇಳಿದಂತೆ ಪ್ರತ್ಯೇಕ ಕೊರೊನಾ ಬಜೆಟ್ ಮಂಡಿಸಿ ರಾಜ್ಯಕ್ಕೆ ನೀಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.