ಬೆಂಗಳೂರು: ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಗಡಿ ಜಿಲ್ಲೆಯಾದ ಮೈಸೂರಿನಲ್ಲಿ ವಿಶೇಷ ಗಮನ ಹರಿಸುವಂತೆ ಜಿಲ್ಲಾಧಿಕಾರಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಗೆ ಆಗಮಿಸಿದ್ದ ಸಂದರ್ಭ ದೂರವಾಣಿ ಕರೆಮಾಡಿ ಮೈಸೂರು ಜಿಲ್ಲಾಧಿಕಾರಿ ಜೊತೆ ಮಾತನಾಡಿದ ಸಿದ್ದರಾಮಯ್ಯ ಇದೇ ಸಂದರ್ಭ ಸೂಚನೆ ನೀಡಿದ್ದಾರೆ.
ಕೇರಳದಿಂದ ಕರ್ನಾಟಕ ಗಡಿ ಒಳಗೆ ಯಾರನ್ನೂ ಬಿಡಬೇಡಿ. ವಿಶೇಷವಾಗಿ ಕೇರಳ ರಾಜ್ಯದವರು ಕೊರೊನಾ ಪಾಸಿಟಿವ್ ಇರೋರನ್ನ ಕರ್ನಾಟಕಕ್ಕೆ ಕಳಿಸ್ತಿದ್ದಾರೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು ಗಡಿಗೆ ಕಳಿಸ್ತಿದ್ದಾರೆ. ಕೇರಳದವರನ್ನ ರಾಜ್ಯದ ಗಡಿಯೊಳಗೆ ಬರದಂತೆ ತಡೆಯಲು ಸೂಚನೆ ನೀಡಿದರು.
ರೈತರು ಬೆಳೆದ ಬೆಳೆಗಳ ಖರೀದಿಸಲು ಸಿದ್ದು ಸೂಚನೆ ನೀಡಿದ್ದು ರೈತರಿಗೆ ಬೆಳೆ ನಷ್ಟ ಆಗಬಾರದು. ಎಪಿಎಂಸಿಗಳ ಮೂಲಕ ರೈತರ ಬೆಳೆಗಳನ್ನ ಖರೀದಿ ಆರಂಭಿಸಿ ಎಂದು ಮೈಸೂರು ಡಿಸಿಗೆ ಸಿದ್ದರಾಮಯ್ಯ ಸಲಹೆ ನೀಡಿದರು.