ಬೆಂಗಳೂರು: ಅಮೆರಿಕದಂತಹ ದೇಶಗಳಿಗೆ ಆರ್ಥಿಕತೆ ನಿಭಾಯಿಸುವುದು ಹೇಗೆ ಎಂದು ಹೇಳಿಕೊಟ್ಟು ಮಾದರಿಯಾಗಿದ್ದ ಮನಮೋಹನ್ ಸಿಂಗ್ ಅವರು ರೂಪಿಸಿ ತಲೆ ಎತ್ತಿ ನಿಲ್ಲವಂತೆ ಮಾಡಿದ್ದ ಭಾರತದ ಆರ್ಥಿಕತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತವು ನೆಲ ಕಚ್ಚುವಂತೆ ಮಾಡಿದೆ. ಇದೇ ಅವರ ಎಂಟು ವರ್ಷಗಳ ಸಾಧನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕರಾಳ ದಿನಗಳು ಕಾದಿವೆ: ನರೇಂದ್ರ ಮೋದಿ ಪ್ರಧಾನಿಯಾಗಿ ಎಂಟು ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ದೇಶಕ್ಕೆ ಮುಂದೆ ಇನ್ನೂ ಕರಾಳ ದಿನಗಳು ಕಾದಿವೆ ಎಂದು ಹೇಳಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಆಗಿದ್ದು 8 ವರ್ಷ. ಆದರೆ, ದೇಶದ ಅಭಿವೃದ್ಧಿ ಮಾತ್ರ 20 ವರ್ಷ ಹಿಂದಕ್ಕೆ ಕುಸಿದಿದೆ. ದೇಶ ವಿಶ್ವಗುರುವಾಗುವ ಬದಲು ಪಾತಾಳದತ್ತ ಕುಸಿಯುತ್ತಿದೆ. ಇದನ್ನು ನಾನು ಸೃಷ್ಟಿಸಿಕೊಂಡು ಹೇಳುತ್ತಿಲ್ಲ. ಸರ್ಕಾರದ ದಾಖಲೆಗಳೇ ಹೇಳುತ್ತಿವೆ ಎಂದು ಕಿಡಿಕಾರಿದ್ದಾರೆ.
ಟೀಕೆಗಳ ಸುರಿಮಳೆ: ಮೋದಿ ಸರ್ಕಾರದ ಮಹಾ ಡಿಸಾಸ್ಟರುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿಯ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಬೆಲೆ ಏರಿಕೆ ಹಿಂದೆಂದೂ ಕಾಣದ ಮಟ್ಟಕ್ಕೆ ಮುಟ್ಟಿದೆ. ಹಣದುಬ್ಬರ ಕಳೆದ 17 ವರ್ಷಗಳಲ್ಲಿ ತೀವ್ರಗತಿಗೆ ಮುಟ್ಟಿದೆ. ನಿರುದ್ಯೋಗ ತಾರಕಕ್ಕೇರಿದೆ. ರಾಜ್ಯಗಳ ಆರ್ಥಿಕತೆ ಕುಸಿದು ಹೋಗುತ್ತಿದೆ.
ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆ. ಇದರ ಜೊತೆಯಲ್ಲಿ ದೇಶದ ಪ್ರಜಾತಾಂತ್ರಿಕೆಯೂ ಭಯಭೀತವಾಗಿದೆ. ಡಿ ಮಾನಿಟೈಸೇಷನ್- ಜಿಎಸ್‍ಟಿ ವ್ಯವಸ್ಥೆ, ಕೊರೊನಾ ಸಾಂಕ್ರಾಮಿಕದ ಎಡಬಿಡಂಗಿ ನಿರ್ವಹಣೆಗಳು ದೇಶದ ಬೆನ್ನುಮೂಳೆಯನ್ನು ಟೊಳ್ಳು ಮಾಡಿವೆ. ದೇಶದ ಜನರು ಕಷ್ಟಪಟ್ಟು ಕಟ್ಟಿದ್ದ ಲಾಭದಾಯಕ ಸಂಸ್ಥೆ/ಕಂಪೆನಿ/ಕಾರ್ಖಾನೆಗಳನ್ನು ಖಾಸಗಿಯವರಿಗೆ ಬಿಡಿಗಾಸಿಗೆ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.
ಬಂಡವಾಳಿಗರನ್ನು ಕೊಬಿಸ್ಬಿ ಮೆರೆಸಲಾಗುತ್ತಿದೆ: ರೈತ, ಕಾರ್ಮಿಕ, ಮಹಿಳೆ, ಯುವಜನರ ವಿರೋಧಿಯಾದ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಜನರನ್ನು ಶತ್ರುಗಳಂತೆ ಭಾವಿಸಿ ದಮನಿಸಲಾಗುತ್ತಿದೆ. ಜನರನ್ನು ಬಡತನದ ದವಡೆಗೆ ತಳ್ಳಲಾಗುತ್ತಿದೆ. ಅಂಬಾನಿ, ಅದಾನಿಗಳಂತಹ ಕಾರ್ಪೊರೇಟ್ ಬಂಡವಾಳಿಗರನ್ನು ಕೊಬಿಸ್ಬಿ ಮೆರೆಸಲಾಗುತ್ತಿದೆ. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಈ ಎಂಟು ವರ್ಷಗಳಲ್ಲಿ ಮಾಡಿದ್ದೇನು ಹಾಗಿದ್ದರೆ? ಎಂದರೆ ತಮ್ಮ ಸ್ನೇಹಿತರಾದ ಬಂಡವಾಳಿಗರ ಸಂಪತ್ತು ಹೆಚ್ಚಿಸುವಂತೆ ನೋಡಿಕೊಂಡಿದ್ದು ಮತ್ತು ಜನರಿಗೆ ಸುಳ್ಳು ಹೇಳುತ್ತಾ ಬಂದಿದ್ದಷ್ಟೇ ಇವರ ಕೆಲಸ.
ಸಾಲದ ಅಂಕಿ-ಅಂಶ: ಕೆಲವು ಬಿಜೆಪಿ ವಕ್ತಾರ ಮೀಡಿಯಾಗಳು ಆರ್ಥಿಕತೆ ಉತ್ತಮವಾಗಿದೆ ಎಂದು ತುತ್ತೂರಿ ಊದುತ್ತಿವೆ. ಆರ್ಥಿಕತೆಯ ವಾಸ್ತವವನ್ನು ಅರ್ಥ ಮಾಡಿಕೊಂಡರೆ ಎದೆ ಒಡೆದು ಹೋದಂತಾಗುತ್ತದೆ. ಭಾರತದಲ್ಲಿ ಕೆಲವರ ಸಂಪತ್ತು ಮಾತ್ರ ಹೆಚ್ಚುತ್ತಿದೆ. ಜನರ ತಲೆಯ ಮೇಲೆ ಸಾಲದ ಶೂಲವನ್ನು ಏರಿಸಲಾಗಿದೆ.
ದೇಶದ ಸಾಲವನ್ನು ಯಾವ ಮಟ್ಟಕ್ಕೆ ಏರಿಸಲಾಗಿದೆಯೆಂದರೆ ಸರ್ಕಾರದ ದಾಖಲೆಗಳ ಪ್ರಕಾರ 2014ರ ಮಾರ್ಚ್ ವೇಳೆಗೆ ಕೇಂದ್ರ ಸರ್ಕಾರ ಮಾಡಿರುವ ಸಾಲ 53.11 ಲಕ್ಷ ಕೋಟಿ ರೂ.ಗಳಷ್ಟಿತ್ತು. ಇದು ದೇಶವು ಸ್ವಾತಂತ್ರ್ಯ ಗಳಿಸಿಕೊಂಡಾಗಿನಿಂದ ಮಾಡಿದ್ದ ಸಾಲ. ಈ ಸಾಲವು 2019-20ರ ವೇಳೆಗೆ 106.45 ಲಕ್ಷ ಕೋಟಿಗೆ ಏರಿಕೆಯಾಯಿತು. 2022ರ ಮಾರ್ಚ್-31ರ ವೇಳೆಗೆ 139.57 ಲಕ್ಷ ಕೋಟಿಗೆ ತಲುಪಿದೆ. 2023 ರ ಮಾರ್ಚ್ ಅಂತ್ಯದ ವೇಳೆಗೆ 155 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಗಳಲ್ಲೂ ಸಾಲದ ಹೊರೆ: ದೇಶದ ರಾಜ್ಯಗಳ ಸಾಲ ಆತಂಕಕಾರಿಯಾಗುವಂತೆ ಏರಿಕೆಯಾಗಿದೆ. 2013-14ರಲ್ಲಿ ಎಲ್ಲ ರಾಜ್ಯಗಳ ಒಟ್ಟು ಸಾಲ 22.12 ಲಕ್ಷ ಕೋಟಿಗಳಷ್ಟಿತ್ತು. ಅದು ಇದೇ ಮಾರ್ಚ್ ಅಂತ್ಯಕ್ಕೆ 70 ಲಕ್ಷ ಕೋಟಿಗೆ ಮುಟ್ಟಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಇದು 80 ಲಕ್ಷ ಕೋಟಿಗೆ ತಲುಪಲಿದೆ. ಇದರಿಂದಾಗಿ ದೇಶದ ಒಟ್ಟಾರೆ ಸಾಲ 235 ಲಕ್ಷ ಕೋಟಿಗಳಾಗಬಹುದು. ಇದು 2014ರ ಮಾರ್ಚ್ 31 ರಂದು 75.23 ಲಕ್ಷ ಕೋಟಿಗಳಷ್ಟಿತ್ತು. ಇದರಿಂದಾಗಿ ದೇಶದ ಪ್ರತಿ ಪ್ರಜೆಯ ತಲೆಯ ಮೇಲೆ 1,70,290 ರೂಪಾಯಿಗಳಷ್ಟು ಸಾಲ ಹೇರಿದಂತಾಗುತ್ತದೆ ಎಂದರು.
ಪ್ರತಿಯೊಬ್ಬರ ಮೇಲೂ ಸಾಲದ ಹೊರೆ: 2014ರಲ್ಲಿ ದೇಶದ ಜನಸಂಖ್ಯೆ 130 ಕೋಟಿಯಷ್ಟಿತ್ತು. ಆಗ ಪ್ರತಿಯೊಬ್ಬರ ತಲೆಯ ಮೇಲಿದ್ದ ಸಾಲದ ಪ್ರಮಾಣ 57,692 ರೂ. ಸದ್ಯ ಜನರ ಮೇಲಿನ ಸಾಲದ ಹೊರೆ 1,70,290 ರೂಪಾಯಿ. ಇದು ಮೋದಿ ಅವರ ಮೊದಲ ಬೃಹತ್ ಸಾಧನೆ. ಜನರ ತಲೆಯ ಮೇಲಿನ ಸಾಲವನ್ನು ಸುಮಾರು 3 ಪಟ್ಟು ಅಥವಾ ಶೇ.300ರಷ್ಟು ಹೆಚ್ಚಿಸಿದ್ದು ಮೋದಿಯವರ ಸಾಧನೆ.
ಭಾರತದ ಹೊರಗಿನ ಸಾಲಗಳನ್ನು ಸಹ ತೀರಿಸಿ ಸುಭೀಕ್ಷವಾಗಿದೆ ಎಂದು ಕೆಲವು ಮಾಧ್ಯಮಗಳು ಹೇಳಿದವು. ಬಿಜೆಪಿಯ ಕೆಲವು ಅಂಧ ಹಿಂಬಾಲಕರು ಬಾಯಿಗೆ ಬಂದದ್ದನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರ ನೋಡಿದರೂ ಸಹ ದೇಶದ ಬಾಹ್ಯ ಸಾಲ 2013-14ರಲ್ಲಿ 3,74,483 ಕೋಟಿ ರೂಪಾಯಿಗಳಷ್ಟಿತ್ತು. ಅದು 2022ರ ಮಾರ್ಚ್ ವೇಳೆಗೆ 6,57,455 ಕೋಟಿಗಳಷ್ಟಾಗಿದೆ. ಇದು ಸರಿ ಸುಮಾರಾಗಿ ದುಪ್ಪಟ್ಟಾಗಿದೆ. ಪರಿಸ್ಥಿತಿ ಹೀಗಿರುವಾಗ ಕೇವಲ ಸುಳ್ಳು ನಿರೂಪಣೆಗಳನ್ನು ಮಾಡಿಕೊಂಡು ಜನರ ಕಣ್ಣಿಗೆ ಮಂಕು ಬೂದಿ ಎರಚುವುದನ್ನು ಬಿಟ್ಟು ಬೇರೇನೂ ನಡೆಯುತ್ತಿಲ್ಲ.
ದುಡಿದ 100 ರೂ.ಗೆ 90ರೂ. ಸಾಲವಿದೆ: ಸಾಲ ನಿಯಂತ್ರಣ ಮಾಡುವುದಕ್ಕಾಗಿಯೇ ಸರ್ಕಾರಗಳು ನಿಯಮಗಳನ್ನು ಮಾಡಿಕೊಂಡಿವೆ. ಅದರಲ್ಲಿ ಮುಖ್ಯವಾಗಿ ರಾಜ್ಯಗಳ ಸಾಲ ಅವುಗಳ ಒಟ್ಟು ಆಂತರಿಕ ಉತ್ಪನ್ನ [ಜಿಎಸ್‍ಡಿಪಿ]ದ ಶೇ.25ನ್ನು ಮೀರಬಾರದು. ಆದರೆ ಮಾರ್ಚ್ 31-2022ಕ್ಕೆ ರಾಜ್ಯಗಳ ಸಾಲದ ಪ್ರಮಾಣ ಶೇ.31.2ಕ್ಕೆ ಏರಿಕೆಯಾಗಿದೆ. ಹಾಗೆಯೇ ದೇಶದ ಒಟ್ಟಾರೆ ಸಾಲ ಜಿಡಿಪಿಯ ಶೇ.60ನ್ನು ಯಾವ ಕಾರಣಕ್ಕೂ ಮೀರಬಾರದು. ಆದರೆ 23ರ ಮಾರ್ಚ್ ಅಂತ್ಯದ ವೇಳೆಗೆ ಈ ಪ್ರಮಾಣವು ಶೇ.89.6ರಷ್ಟಕ್ಕೆ ಏರಿಕೆಯಾಗುತ್ತದೆ.
ಉದಾಹರಣೆಗೆ ದೇಶದ ಒಟ್ಟಾರೆ ದುಡಿಮೆಯಲ್ಲಿ 100 ರೂಪಾಯಿಗೆ 90 ರೂಪಾಯಿಯಷ್ಟು ಸಾಲವಿದೆ ಎಂದು ಅರ್ಥ. ಕಳೆದ ವರ್ಷದ ಲೆಕ್ಕ ನೋಡಿದರೆ ದೇಶವು ದುಡಿದ 100 ರೂಪಾಯಿಯಲ್ಲಿ 44 ರೂಪಾಯಿ ಕೇವಲ ಬಡ್ಡಿ ಮುಂತಾದವಕ್ಕೆ ಖರ್ಚಾಗುತ್ತಿತ್ತು ಎಂದಿದ್ದಾರೆ.
ಸಾಲ ಅಪಾಯಕಾರಿ ಹಂತಕ್ಕೆ ಮುಟ್ಟಿದೆ: ಮೋದಿಯವರ ಸರ್ಕಾರ ಜಿಡಿಪಿಯ ಗಾತ್ರದ ಲೆಕ್ಕವನ್ನೂ ಸಹ ಸರಿಯಾಗಿ ಹೇಳುತ್ತಿಲ್ಲ. ಅದು 230 ರಿಂದ 270 ಲಕ್ಷ ಕೋಟಿಯವರೆಗೂ ಇರಬಹುದೆಂದು ಅಂದಾಜು ಮಾಡಲಾಗುತ್ತಿದೆ. ಈ ಲೆಕ್ಕದಲ್ಲಿ ನೋಡಿದರೂ ದೇಶದ ಒಟ್ಟು ದುಡಿಮೆಯನ್ನು ಮೀರಿ ಸಾಲ ಬೆಳೆದಿದೆ ಎಂದು ಅಂದಾಜಿಸಲಾಗಿದೆ. ಶ್ರೀಲಂಕಾ ದಿವಾಳಿ ಎದ್ದಿದ್ದು ಕೂಡ ಹೀಗೆಯೇ. ಯಾವುದೇ ದೇಶದಲ್ಲಾಗಬಹುದು ಅಥವಾ ಮನೆಯಲ್ಲಾಗಬಹುದು ದುಡಿಮೆಗಿಂತ ಸಾಲವೇ ಹೆಚ್ಚಾದರೆ ಅದನ್ನು ಎಂದಾದರೂ ಒಳ್ಳೆಯ ಆರ್ಥಿಕತೆಯ ನಿರ್ವಹಣೆ ಎನ್ನಲು ಸಾಧ್ಯವೆ? ಅಥವಾ ದಿವಾಳಿ ಆರ್ಥಿಕತೆ ಎನ್ನಬೇಕೆ? ಎಂಬುದು ಸಾಮಾನ್ಯ ಜ್ಞಾನ ಇರುವವರಿಗೆಲ್ಲ ಅರ್ಥವಾಗುತ್ತದೆ. ರಾಜ್ಯದ ಸಾಲ ಕೂಡ ಅಪಾಯಕಾರಿಯಾದ ಹಂತಕ್ಕೆ ಮುಟ್ಟಿದೆ.
ರಾಜ್ಯ ಸರ್ಕಾರ ಮಾಡಿರುವ ಸಾಲ: ಸರ್ಕಾರದ ದಾಖಲೆಗಳ ಪ್ರಕಾರ 2025-26ರ ವೇಳೆಗೆ ಎಲ್ಲವೂ ನಿಯಂತ್ರಣದಲ್ಲಿದ್ದರೆ ರಾಜ್ಯದ ಸಾಲದ ಪ್ರಮಾಣ 7.38 ಕೋಟಿಗಳಷ್ಟಾಗಲಿದೆ. ಸರ್ಕಾರದ ಈ ಅಂದಾಜು 2022-23 ರಲ್ಲೇ ಭಂಗವಾಗುತ್ತಿದೆ. ಬೊಮ್ಮಾಯಿಯವರು ಮಾಧ್ಯಮಗಳ ಮುಂದೆ, ಸದನದಲ್ಲಿ ಹತ್ತಾರು ಬಾರಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ 67 ಸಾವಿರ ಕೋಟಿ ಸಾಲ ಮಾಡುತ್ತೇವೆ ಎಂದಿದ್ದರು, ಆದರೆ, ಹಣಕಾಸು ಪರಿಸ್ಥಿತಿ ಸುಧಾರಿಸಿದ ಕಾರಣ ನಾವು ಸಾಲದ ಪ್ರಮಾಣವನ್ನು 63 ಸಾವಿರ ಕೋಟಿಗೆ ಇಳಿಸುತ್ತೇವೆ ಎಂದಿದ್ದರು.
ಆದರೆ, ರಾಜ್ಯದ ಆರ್ಥಿಕ ಇಲಾಖೆಯು ನೀಡಿರುವ ದಾಖಲೆ ನೋಡಿದರೆ, ಸರ್ಕಾರವು ಈ ವರ್ಷ ಸಾಲದ ಪ್ರಮಾಣವನ್ನು ಇಳಿಸುವುದಿರಲಿ, ಯಡಿಯೂರಪ್ಪನವರು ಬಜೆಟ್ನಲ್ಲಿ ಘೋಷಿಸಿದ್ದಕ್ಕಿಂತ 13,000 ಕೊಟಿಗಳಷ್ಟು ಹೆಚ್ಚು ಅಂದರೆ 80.4 ಸಾವಿರ ಕೋಟಿಗಳಷ್ಟು ಸಾಲ ಮಾಡಿದ್ದಾರೆ. ಹಾಗಾಗಿ ಈ ವರ್ಷದ ಕಡೆಯ ಹೊತ್ತಿಗೆ ರಾಜ್ಯದ ಸಾಲದ ಪ್ರಮಾಣ 5 ಲಕ್ಷದ 40 ಸಾವಿರ ಕೋಟಿಗಳಿಗೆ ಏರಿಕೆಯಾಗುತ್ತಿದೆ. 2018ರ ಮಾರ್ಚ್‍ನಲ್ಲಿ ರಾಜ್ಯದ ಸಾಲದ ಪ್ರಮಾಣ 2.42 ಲಕ್ಷ ಕೋಟಿಗಳಷ್ಟಿತ್ತು. ಅಲ್ಲಿಂದ ಈಚೆಗೆ 3 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಲಾಗಿದೆ. ರಾಜ್ಯದ ಜನರ ತಲೆಯ ಮೇಲೆ ಸಾಲದ ಶೂಲ ಇರಿಯುತ್ತಿದೆ. ಇದು ಸರ್ಕಾರ ಮಾಡಿರುವ ಸಾಲ ಎಂದು ವಿವರಿಸಿದ್ದಾರೆ.
ದೇಶವನ್ನು ಸಾಲದ ಸುನಾಮಿಗೆ ಸಿಲುಕಿಸಿದ್ದಾರೆ: ರಾಜ್ಯದ ಜನರು ಎಂಥ ಬಿಕ್ಕಟ್ಟಿನಲ್ಲಿದ್ದಾರೆಂದರೆ, ತಮ್ಮ ಮನೆಗಳಲ್ಲಿದ್ದ ಚಿನ್ನವನ್ನು ಒತ್ತೆ ಇಟ್ಟು ಸುಮಾರು 4.5 ಲಕ್ಷ ಕೋಟಿ ಸಾಲವನ್ನು ಮುತ್ತುಟ್, ಮಣಪ್ಪುರಂ ಮುಂತಾದ 4 ಕಂಪನಿಗಳಿಂದಲೇ ಪಡೆದಿದ್ದಾರೆ. ನಮ್ಮ ರಾಜ್ಯದ ರೈತರು ಕೃಷಿಗಾಗಿ ಮಾಡಿರುವ ಸಾಲದ ಪ್ರಮಾಣ 2022ರ ಜನವರಿ ವೇಳೆಗೆ 1.60 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾದ ನಿಲುವು ತಾಳಿರುವುದರಿಂದ, ಜನಪರ ಆರ್ಥಿಕ ನೀತಿ ಇಲ್ಲದಿರುವುದರಿಂದ ದೇಶವನ್ನು ಸಾಲದ ಸುನಾಮಿಗೆ ಸಿಲುಕಿಸಿದ್ದಾರೆ. ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಾದಷ್ಟು ಅನುದಾನಗಳನ್ನು, ತೆರಿಗೆ ಹಂಚಿಕೆಯನ್ನು ಮಾಡದಿರುವುದರಿಂದ ನಮ್ಮ ರಾಜ್ಯವು ಸಾಲದ ಸುಳಿಗೆ ಸಿಲುಕಿಕೊಂಡಿದೆ.
15 ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ಹೆಚ್ಚುವರಿಯಾಗಿ 5,495 ಕೋಟಿ ರೂ. ಗಳನ್ನು ಶಿಫಾರಸು ಮಾಡಿದ್ದರೂ ಅದನ್ನು ಕೊಡುವುದಿಲ್ಲವೆಂದು ಹೇಳಿ ರಾಜ್ಯದ ಜನರ ಬೆನ್ನಿಗೆ ಇರಿದ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೆ ರಾಜ್ಯದಿಂದ ರಾಜ್ಯಸಭೆಗೆ ಆರಿಸಲು ಬಿಜೆಪಿ ಟಿಕೆಟ್ ನೀಡಿ ನಮ್ಮ ಜನರಿಗೆ ಅವಮಾನ ಮಾಡಿದೆ. ಕೇಂದ್ರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಜನಪರವಾದ ನೀತಿ ಹೊಂದಿಲ್ಲದ ಕಾರಣ ರಾಜ್ಯದ ಜನರು ಸಾಲದ ಸಂಕೋಲೆಗೆ ಸಿಲುಕುತ್ತಿದ್ದಾರೆ. 3-4 ವರ್ಷಗಳ ಹಿಂದೆ ದೇಶದಲ್ಲಿ ಆರ್ಥಿಕ ಶಿಸ್ತಿಗೆ ಹೆಸರಾಗಿದ್ದ ನಮ್ಮ ರಾಜ್ಯ ಇಂದು ದಿವಾಳಿಯಂಚಿಗೆ ಬಂದು ನಿಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ವೇಳೆ ಸುಟ್ಟುಹಾಕಿದ ಚಡ್ಡಿಯೇ ಅಪರಾಧವಾಗಿ ಕಂಡಿದೆ: ಸಿದ್ದರಾಮಯ್ಯ ಗರಂ