ಬೆಂಗಳೂರು: ಶ್ರೀ ಗುರುರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಸೌಹಾರ್ದ ಬ್ಯಾಂಕ್ನಲ್ಲಿನ ಬಹುಕೋಟಿ ವಂಚನೆ ಸಂಬಂಧ ಬ್ಯಾಂಕ್ ಅಧ್ಯಕ್ಷರಾಗಿದ್ದ ರಾಮಕೃಷ್ಣರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಆದರೆ, ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಸಿಬಿಐಗೆ ವಹಿಸಬೇಕು. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗುರುರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾಪೋಷಕ ಡಾ. ಶಂಕರ ಗುಹಾ ದ್ವಾರಕನಾಥ್ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಡಾ.ಶಂಕರ್ ಗುಹಾ ದ್ವಾರಕನಾಥ್ ಅವರು, ಸುದೀರ್ಘ ಎರಡು ವರ್ಷಗಳ ಸತತ ಹೋರಾಟ ಮಾಡಿದ್ದರ ಫಲವಾಗಿ ಜಯಸಿಕ್ಕಿದ್ದು ಸಮಾಧಾನ ತಂದಿದೆ. ಕರ್ನಾಟಕ ಪೊಲೀಸರ ಮೇಲೆ ನಮಗೆ ನಂಬಿಕೆಯಿದೆ.
ಆದರೆ,ರಾಜಕೀಯ ಒತ್ತಡ ಬಂದ ಹಿನ್ನೆಲೆ ಸ್ವಲ್ಪ ಹಿನ್ನಡೆಯಾಗಿತ್ತು. ತನಿಖೆ ವೇಳೆ 834 ಕೋಟಿ ಬೇನಾಮಿ ಹಣ ಪತ್ತೆಯಾಗಿದೆ. ಇದು ಸೂಕ್ತವಾದ ಸಮಯವಾಗಿದ್ದು, ಸಿಬಿಐ ತನಿಖೆ ಆಗಬೇಕಿದೆ. ಸಿಬಿಐ ತನಿಖೆ ನಡೆಸಿದರೆ ತಪ್ಪಿತಸ್ಥರನ್ನು ಬಂಧಿಸಬೇಕು. ಸಾಕಷ್ಟು ಹಗರಣಗಳು ನಡೆದಿದೆ. ಠೇವಣಿದಾರರಿಗೆ ನ್ಯಾಯ ಸಿಗಬೇಕಾದರೆ ಸಿಬಿಐ ತನಿಖೆ ಆಗಲೇಬೇಕು. ರಾಜ್ಯ ಸರ್ಕಾರ ಸಿಬಿಐಗೆ ವಹಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಬ್ಯಾಂಕ್ನಲ್ಲಿ ಹಣವಿಟ್ಟು ಹಣ ಕಳೆದುಕೊಂಡ ಕನಿಷ್ಠ ನೂರು ಮಂದಿ ಸಾವನ್ನಪ್ಪಿದ್ದಾರೆ. ಷೇರುದಾರರಿಗೆ ಹಣ ಮರು ಪಾವತಿ ಮಾಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಾಯ ಮಾಡಬೇಕು. ಏಪ್ರಿಲ್ವರೆಗೂ ಅವಕಾಶ ನೀಡುತ್ತೇವೆ. ಅಷ್ಟರೊಳಗೆ ಸರ್ಕಾರದಿಂದ ಸ್ಪಂದನೆ ಸಿಗದೇ ಹೋದರೆ ಉಪವಾಸ ಸತ್ಯಾಗ್ರಹ ಕೈ ಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ತೀವ್ರ ವಿರೋಧ : 3 ಗಂಟೆಗೆ ಸದನ ಮುಂದೂಡಿದ ಸ್ಪೀಕರ್
ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬ್ಯಾಂಕ್‌ನ ಅಧ್ಯಕ್ಷ ಕೆ. ರಾಮಕೃಷ್ಣರನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಇದೇ ಫೆಬ್ರವರಿ 18ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳಲಿದ್ದಾರೆ.
ರಾಮಕೃಷ್ಣ ಅವರು ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2,876 ಮಂದಿಗೆ 1,544.43 ಕೋಟಿ ರೂಪಾಯಿಯನ್ನು ಸಾಲವಾಗಿ ನೀಡಲಾಗಿದೆ. ಇದರಲ್ಲಿ 892.85 ಕೋಟಿ ರೂಪಾಯಿಯನ್ನು ಬೋಗಸ್ ದಾಖಲೆಗಳಿಗೆ ಸಾಲವಾಗಿ ನೀಡಲಾಗಿದೆ ಎಂದು ಇವರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ದೂರು ದಾಖಲಾಗಿತ್ತು.