ಬೆಂಗಳೂರು : ಬಿಜೆಪಿ ನಾಯಕರು ಸತ್ಯಶೋಧನಾ ಸಮಿತಿ ಹೆಸರಿನಲ್ಲಿ ಶಿವಮೊಗ್ಗಕ್ಕೆ ಹೋಗಿರುವುದು ಚುನಾವಣಾ ಗಿಮಿಕ್ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಬಿಜೆಪಿಯವರು ಕೇವಲ ಇಂಥದ್ದೇ ಸತ್ಯ ಶೋಧನಾ ಸಮಿತಿ ನಡೆಸುತ್ತಾರೆ. ಲೋಕಸಭೆ ಚುನಾವಣೆ ಬಂದಾಗ ಪಾಕಿಸ್ತಾನ, ಭಯೋತ್ಪಾದಕರು, ಅಂಜನಾದ್ರಿ ಆಂಜನೇಯ, ಮಸೀದಿ ನೆನಪಾಗುತ್ತದೆ ಎಂದರು.
ಹಿಂದೂ ಹೆಸರಿನಲ್ಲಿ ಬಿಜೆಪಿಗರು ರಾಜಕಾರಣ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಹಿಂದೂಗಳಿಲ್ವಾ?. ನಾವೆಲ್ಲ ಹಿಂದೂಗಳಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು. ಚುನಾವಣೆ ಬಂದಾಗ ಬಿಜೆಪಿಗರಿಗೆ ಅಂಜನಾದ್ರಿ ನೆನಪಾಗುತ್ತದೆ. ನಾಲ್ಕು ವರ್ಷ ಬಿಜೆಪಿಯವರು ಅಧಿಕಾರದಲ್ಲಿದ್ದರು. ಅಂಜನಾದ್ರಿಗೆ ಏನು ಕೊಟ್ಟಿದ್ದಾರೆ ಎಂದು ಹೇಳಲಿ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 120 ರೂ. ಕೋಟಿ ಅನುದಾನ ಮೀಸಲಿಟ್ಟದ್ದಾಗಿ ಎಲ್ಲೆಡೆ ಹೇಳಿಕೊಂಡಿದ್ದರು. ಬಿಜೆಪಿಯವರು ಕೊಟ್ಟಿದ್ದೆಲ್ಲ, ಕೇವಲ ಪೇಪರ್ಗೆ ಸೀಮಿತ ಎಂದು ಹೇಳಿದರು.
ಕನಕಗಿರಿ ಕ್ಷೇತ್ರಕ್ಕೆ ತೋಟಗಾರಿಕಾ ಥೀಮ್ ಪಾರ್ಕ್ ಮಾಡಿದ್ದಾಗಿ ಹೇಳಿದ್ದರು. ಇವತ್ತಿನವರೆಗೂ ನಾವು ಹುಡುಕುತ್ತಲೇ ಇದ್ದೇವೆ. ತೋಟಗಾರಿಕೆ ಥೀಮ್ ಪಾರ್ಕ್ ಎಲ್ಲಿದೆ ಅಂತ ಸಿಕ್ಕಿಯೇ ಇಲ್ಲ ಎಂದು ಲೇವಡಿ ಮಾಡಿದ ಸಚಿವರು, ಹಿಂದಿನ ಸರ್ಕಾರದಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬ ಬಗ್ಗೆ ಪ್ರವಾಸೋದ್ಯಮ ಇಲಾಖೆಯಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದರು.
ರಾಗಿಗುಡ್ಡ ಗಲಭೆ ಪೂರ್ವನಿಯೋಜಿತ ಸಂಚು: ಶಿವಮೊಗ್ಗದ ರಾಗಿಗುಡ್ಡ ಹಾಗೂ ಶಾಂತಿ ನಗರ ಪ್ರದೇಶದಲ್ಲಿ ನಡೆದಂತಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೊನ್ನಾಳಿ ಪಟ್ಟಣದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಒಬ್ಬ ಮತಾಂಧ. ಅವನನ್ನು ವೈಭವೀಕರಿಸಿ ಕರ್ನಾಟಕವನ್ನು ತಾಲಿಬಾನ್ ರಾಜ್ಯ ಮಾಡೋಕೆ ಹೊರಟಿರುವುದು ನಡೆಯುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.
ಗೃಹ ಸಚಿವ ಪರಮೇಶ್ವರ್ ಹೇಳಿಕೆ ಪ್ರಚೋದನೆ ಕೊಟ್ಟಂತಿದೆ. ಸಣ್ಣ ಘಟನೆ ಅಂತ ಹೇಳೋದು ಮತ್ತಷ್ಟು ಪ್ರಚೋದನೆ ಕೊಟ್ಟಂತೆ ಆಗುತ್ತದೆ. ಶಿವಮೊಗ್ಗದ ಜನ ತತ್ತರಿಸಿ ಹೋಗಿದ್ದಾರೆ. ಇಡೀ ನಾಡಿನಲ್ಲಿ ಗಣೇಶೋತ್ಸವ ಸಮಿತಿಗಳು, ಹಳ್ಳಿ ಗಲ್ಲಿಯಿಂದ ಪಟ್ಟಣದವರೆಗೆ ಎಲ್ಲಾ ಕಡೆ ನಿಮಜ್ಜನವನ್ನು ಬಹಳ ವಿಜೃಂಭಣೆಯಿಂದ ಮಾಡಿದ್ದಾರೆ. ಇನ್ನೂ ಕೆಲವು ಕಡೆ ನಿಮಜ್ಜನ ಇದೆ. ಇದುವರೆಗೆ ಒಂದೇ ಒಂದು ಸಣ್ಣ ಕಹಿ ಘಟನೆಗಳು ನಡೆದಿಲ್ಲ. ಶಾಂತ ರೀತಿಯಿಂದ ಕುಣಿದು ಕುಪ್ಪಳಿಸಿ, ವಾದ್ಯಗಳ ಮೆರವಣಿಗೆ ಮೂಲಕ ಯುವಕರು ಮೆರವಣಿಗೆ ಮಾಡುತ್ತಾರೆ. ಒಂದೂ ಕಹಿ ಘಟನೆ ನಡೆದಿಲ್ಲ, ತೋರಿಸಿ ನೋಡೋಣ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಅವರ ಭಾವಚಿತ್ರವನ್ನು ಅಳವಡಿಸಿ, ತಲ್ವಾರ್ ಪ್ರದರ್ಶಿಸಿ ಅಟ್ಟಹಾಸ ಮೆರೆದರಲ್ಲ, ಆಗ ಜಿಲ್ಲಾಡಳಿತ ಸತ್ತು ಹೋಗಿತ್ತಾ?. ಇವೆಲ್ಲಾ ಘಟನೆಗಳಿಗೆ ಜಿಲ್ಲಾಡಳಿತವೇ ಕಾರಣ. ಅದನ್ನು ತಕ್ಷಣವೇ ತೆರವುಗೊಳಿಸಬೇಕಾಗಿತ್ತು. ದೊಡ್ಡ ದೊಡ್ಡ ತಲ್ವಾರ್ಗಳನ್ನು ನಿರ್ಮಿಸಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದು ಪೂರ್ವ ನಿಯೋಜಿತ ಸಂಚು ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಗಿಗುಡ್ಡ ಗಲಭೆ ಪೂರ್ವನಿಯೋಜಿತ ಸಂಚು: ಮಾಜಿ ಶಾಸಕ ರೇಣುಕಾಚಾರ್ಯ