ಬೆಂಗಳೂರು: ಮಾನವ ಹಕ್ಕು ಆಯೋಗದ ಅಧಿಕಾರಿಗಳ ಹೆಸರಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಮೂರ್ತಿ, ಪ್ರದೀಪ್, ಧ್ರುವರಾಜ್, ರಮ್ಯ, ಸುಶ್ಮಿತಾ, ಜಯಲಕ್ಷ್ಮಿ ಹಾಗೂ ಇಂದ್ರ ಬಂಧಿತರು.
ಆರೋಪಿಗಳು ಇದೇ ತಿಂಗಳ 14ರಂದು ಭದ್ರಪ್ಪ ಲೇಔಟ್ ಮಾತಾಜಿ ಹೋಂ ಅಪ್ಲೈಯನ್ಸ್ ಅಂಗಡಿಗೆ ತೆರಳಿದ್ದರು. ಮಾಲೀಕರಿಗೆ ನಾವು ಮಾನವ ಹಕ್ಕು ಆಯೋಗದ ಅಧಿಕಾರಿಗಳೆಂದು ಹೇಳಿ ನಿಮ್ಮ ಶಾಪ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಸೇಲ್ ಮಾಡುತ್ತಿದ್ದೀರಾ. ನಿಮ್ಮ ಮೇಲೆ ಕೇಸ್ ಹಾಕುತ್ತೇವೆಂದು ಬೆದರಿಸಿ 2 ಸಾವಿರ ರೂ ಹಣ ಪಡೆದುಕೊಂಡಿದ್ದಾರೆ.
ನಂತರ ನರೇಶ್ ಜಿ ಪಟೇಲ್ ಎಂಬುವರ ರಾಜಲಕ್ಷ್ಮೀ ಫ್ಯಾನ್ಸಿ ಸ್ಟೋರ್, ಸುವಾಲಾಲ್ ಎಂಬುವವರ ಬಾಲಾಜಿ ಹೋಂ ಅಪ್ಲೈಯನ್ಸ್‌ಗೂ ಸಹ ನುಗ್ಗಿ ಹೆದರಿಸಿ 5 ಸಾವಿರ ಹಣ ಪಡೆದು ಪರಾರಿ ಆಗಿದ್ದರು. ಈ ಬಗ್ಗೆ ನೊಂದವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದ ಕೊಡಿಗೇಹಳ್ಳಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಹುಂಡೈ ಕಾರು, 2,000 ರೂ ನಗದು ಸೀಜ್ ಮಾಡಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಪೊಲೀಸರ ಬೃಹತ್ ಕಾರ್ಯಾಚರಣೆ:132 ಕೆಜಿ ಗಾಂಜಾ ವಶ, ಇಬ್ಬರ ಬಂಧನ