ಬೆಂಗಳೂರು: ''ಫೆಬ್ರವರಿ 11ರಂದು ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 64.13 ಲಕ್ಷ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ'' ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ರಾಜ್ಯಾದ್ಯಂತರ ಶನಿವಾರ ಲೋಕ ಅದಾಲತ್ ನಡೆಸಿ, ಹೈಕೋರ್ಟ್ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 1,87,171 ಪ್ರಕರಣಗಳು ಹಾಗೂ 62,26,437 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ 64,13,608 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅಲ್ಲದೆ, 1,404 ಕೋಟಿ ರೂ. ಪರಿಹಾರ ಕೊಡಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 232 ಕೋಟಿ ರೂ. ಗಳನ್ನು ಜಮೆ ಮಾಡಿಸಲಾಗಿದೆ'' ಎಂದು ಹೇಳಿದರು.
ಒಂದಾದ 200ಕ್ಕೂ ಅಧಿಕ ದಂಪತಿ: ಈ ಬಾರಿಯ ಲೋಕ ಅದಾಲತ್‌ನಲ್ಲಿ ಒಟ್ಟು 670 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 222ಕ್ಕೂ ಅಧಿಕ ಪ್ರಕರಣಗಳಲ್ಲಿ ದಂಪತಿ ರಾಜೀ ಸಂಧಾನದಿಂದ ಮತ್ತೆ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ.
20 ವರ್ಷಕ್ಕೂ ಹಳೆಯ ಪ್ರಕರಣಗಳ ಇತ್ಯರ್ಥ: ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 23 ವರ್ಷ ಹಳೆಯ ವಿಭಾಗ ದಾವೆ ಹಾಗೂ ಬಳ್ಳಾರಿಯ ಹೊಸಪೇಟೆ ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಬಾಕಿ ಇದ್ದ 22 ವರ್ಷ ಹಳೆಯ ಪಾರ್ಟಿಷನ್ ಸೂಟ್ ಅನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ.
ಒಂದೇ ಪ್ರಕರಣದಲ್ಲಿ 1.25 ಕೋಟಿ ಪರಿಹಾರ: ಮೋಟಾರು ಅಪಘಾತ ಪರಿಹಾರಕ್ಕೆ ಸಂಬಂಧಿಸಿದ ಒಟ್ಟು 4,050 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 179 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಹಾಸನದ ಹಿರಿಯ ಸಿವಿಲ್ ನ್ಯಾಯಾಧೀಶರ ಕೋರ್ಟ್‌ನಲ್ಲಿದ್ದ ಪ್ರಕರಣವೊಂದರಲ್ಲಿ 1.25 ಕೋಟಿ ರೂ. ಪರಿಹಾರವನ್ನು ವಿಮಾ ಸಂಸ್ಥೆಯ ಮೂಲಕ ಕೊಡಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಭಾಗಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರು ಲೋಕ ಅದಾಲತ್‌ನಲ್ಲಿ ಖುದ್ದು ಭಾಗವಹಿಸಿದ್ದು ವಿಶೇಷವಾಗಿತ್ತು. ಕೋಲಾರ ಜಿಲ್ಲೆಯ 20 ವರ್ಷ ಹಳೆಯ ದಾವೆಯೊಂದನ್ನು ಇತ್ಯರ್ಥಪಡಿಸಿದ ಮುಖ್ಯನ್ಯಾಯಮೂರ್ತಿಗಳು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್, ಸಿಎಂಎಂ ಕೋರ್ಟ್, ಮೇಯೋಹಾಲ್ ಕೋರ್ಟ್‌ಗಳಿಗೆ ಭೇಟಿ ನೀಡಿ, ನ್ಯಾಯಾಧೀಶರು, ವಕೀಲರು ಕಕ್ಷಿದಾರರೊಂದಿಗೆ ಸಂವಾದ ನಡೆಸಿದರು ಎಂದು ವೀರಪ್ಪ ತಿಳಿಸಿದರು.
ವಿಲೇವಾರಿಯಾದ ಪ್ರಕರಣಗಳ ವಿವರ:
- ಕಂದಾಯ ಇಲಾಖೆ ಪ್ರಕರಗಳು- 4,14,202
- ಬ್ಯಾಂಕ್ ವಸೂಲಾತಿ- 14,723 ಪ್ರಕರಣಗಳು, 157 ಕೋಟಿ ರೂ. ವಸೂಲಿ
- ಚೆಕ್ ಬೌನ್ಸ್‌ಗೆ ಕೇಸ್‌ಗಳು- 10,766
- ಪಾರ್ಟಿಷನ್ ಸೂಟ್ (ವಿಭಾಗ ದಾವೆ)- 2,724
- ಎಕ್ಸಿಕ್ಯೂಷನ್ ಪ್ರಕರಣಗಳು- 4,723 ಪ್ರಕರಗಳು, 221 ಕೋಟಿ ರೂ. ಪರಿಹಾರ
- ಕೆ-ರೇರಾ ಹಾಗೂ ಕೆ-ರೀಟ್- ಒಟ್ಟು 116 ಪ್ರಕರಣಗಳು, 6 ಕೋಟಿ ರೂ. ಪರಿಹಾರ
- ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ- 192 ಪ್ರಕರಣಗಳು, 7 ಕೋಟಿ ರೂ. ಪರಿಹಾರ
ಇದನ್ನೂ ಓದಿ: ಚಿಕ್ಕಮಗಳೂರು: ಮಾರ್ಗ ಮಧ್ಯೆ ನಿಂತ ಆಂಬ್ಯುಲೆನ್ಸ್.. ಜೀವನ್ಮರಣದ ನಡುವೆ ಹೋರಾಡಿದ ಗರ್ಭಿಣಿ