ಬೆಂಗಳೂರು: ರಾಜ್ಯದಲ್ಲಾಗಿರುವ ನೆರೆ ಹಾನಿಗೆ ಪರಿಹಾರ ಹಣ ಹೊಂದಿಸುವುದು ಕಷ್ಟಕರವಾದ ಕೆಲಸ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ, ಅತಿವೃಷ್ಟಿಯಿಂದ ರಾಜ್ಯದಲ್ಲಿ 4,200 ಕಿಮೀಗಳಷ್ಟು ರಸ್ತೆಗೆ ಹಾನಿಯಾಗಿದ್ದು, ಸೇತುವೆ, ಕಟ್ಟಡಗಳು ಸೇರಿದಂತೆ ಪರಿಹಾರ ಕಾರ್ಯಕ್ಕಾಗಿ ಒಟ್ಟು 7,600 ಕೋಟಿ ರೂ. ಅಗತ್ಯವಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ರಸ್ತೆ, ಸೇತುವೆ, ಕಟ್ಟಡ ದುರಸ್ತಿ ಕಾರ್ಯಕ್ಕೆ ನಾವು 500 ಕೋಟಿ ರೂ. ಒದಗಿಸಿದ್ದು, ಉಳಿದ ಹಣ ಹೊಂದಿಸುವ ಮಾರ್ಗವನ್ನು ನೋಡುತ್ತಿದ್ದೇವೆ. ಇಷ್ಟಾದರೂ ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ಹಣ ಒದಗಿಸುವುದು ಕಷ್ಟದ ಕೆಲಸ ಎಂದರು.
ಇನ್ನು 32 ರಾಜ್ಯ ಹೆದ್ದಾರಿಗಳಲ್ಲಿರುವ ಮಾನವಟೋಲ್ ಗೇಟ್‍ಗಳನ್ನು ಎಲೆಕ್ಟ್ರಾನಿಕ್ ಟೋಲ್‍ಗೇಟ್‍ಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರದ ನೆರವು ಪಡೆಯಲಾಗುವುದು. ಆ ಮೂಲಕ ವಾಹನಗಳ ಶುಲ್ಕ ಸಂಗ್ರಹಣೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಬಹುದು. ಸಮಾಜಘಾತಕ ಶಕ್ತಿಗಳು ಟೋಲ್‍ಗೇಟ್ ಮುಖಾಂತರ ಸಾಗುತ್ತಿದ್ದರೆ ಅವರ ಭಾವಚಿತ್ರ ದಕ್ಕುತ್ತದೆ. ಹಾಗೆಯೇ ನಕಲಿ ನಂಬರ್ ಪ್ಲೇಟ್ಗಳಿರುವ ವಾಹನವನ್ನು ಸುಲಭವಾಗಿ ಪತ್ತೆ ಮಾಡಬಹುದು. ಇಂತಹ ಟೋಲ್‍ಗೇಟ್‍ಗಳನ್ನು ನಿರ್ಮಿಸುವ ಮೂಲಕ ದೇಶಾದ್ಯಂತ ಏಕರೂಪದ ಶುಲ್ಕ ವಿಧಿಸುವುದು ಕೇಂದ್ರ ಸರ್ಕಾರದ ಉದ್ದೇಶ ಎಂದ ಅವರು,ಇಂತಹ ಟೋಲ್‍ಗೇಟ್‍ಗಳ ವ್ಯಾಪ್ತಿಯಲ್ಲಿ ನೈಸ್ ರಸ್ತೆಯ ಟೋಲ್‍ಗೇಟ್‍ನ್ನು ಒಳಪಡಿಸುವುದು ಸಾಧ್ಯವಿಲ್ಲದ ಕೆಲಸ ಎಂದಿದ್ದಾರೆ ಕಾರಜೋಳ.