ಬೆಂಗಳೂರು: ನಗರದಲ್ಲಿ ಕೊರೊನಾ ಭೀತಿ ಹೆಚ್ಚಳವಾಗಿದ್ದರಿಂದ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಯ ಬಳಿ ಹೊಸ ಕಟ್ಟಡ ನಿರ್ಮಾಣವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈವರೆಗೆ ರಾಜ್ಯದಲ್ಲಿ 14 ಕೊರೊನಾ ಕೇಸ್ ಪತ್ತೆಯಾಗಿವೆ. ಕೊರೊನಾಗೆ ಒಳಗಾದವರಿಗೆ ಚಿಕಿತ್ಸೆ ನೀಡುವ ಸಲುವಾಗಿ ಬಿಬಿಎಂಪಿ ಈಗಾಗಲೇ ಬೌರಿಂಗ್ ಆಸ್ಪತ್ರೆ ಬಳಿ ಹೊಸ ಕಟ್ಟಡ ನಿರ್ಮಿಸಿ 200 ಹಾಸಿಗೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಇಲ್ಲಿಗೆ ವೆಂಟಿಲೇಟರ್, ಹಾಸಿಗೆ, ಬೆಡ್ ಶೀಟ್ ವ್ಯವಸ್ಥೆ ಬೇಕಾಗಿದ್ದು, ಅದನ್ನು ಇನ್ಫೋಸಿಸ್ ಫೌಂಡೇಷನ್ ಅವರು ಒದಗಿಸುವ ಭರವಸೆ ನೀಡಿದ್ದಾರೆ. ಅವರ ಬಳಿ ಮಾತುಕತೆ ನಡೆಸಲಾಗುವುದು, ಇದು ಕೇವಲ ಕೋವಿಡ್ 19 ಗೆ ಒಳಗಾದವರಿವದ ಮಾತ್ರ ಸೀಮಿತ ಎಂದು ತಿಳಿಸಿದರು.
ಸದ್ಯ ಐದು ಕಡೆ ಲ್ಯಾಬ್ ಟೆಸ್ಟಿಂಗ್ ಇದೆ. ಪ್ರತಿ ದಿನ 500 ಸ್ಯಾಂಪಲ್ಗಳ ಪರೀಕ್ಷೆ ನಡೆಯುತ್ತಿದೆ. ಹಾಗೆ 14 ಮಂದಿ ಸೋಂಕಿತರಿಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಯಾರಾದರು ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರೆ ಅವರು ಚಿಕಿತ್ಸೆಗೆ ಒಳಗಾಗಬೇಕು, ಜ್ಞಾನ ಇದ್ದವರು ಚಿಕಿತ್ಸೆಗೆ ಖಂಡಿತಾ ಒಳಗಾಗ್ತಾರೆ ಎಂದರು. ಟಾಸ್ಕ್ ಫೋರ್ಸ್ ಈಗಾಗಲೇ ರಚನೆ ಆಗಿದ್ದು, ಮೊದಲ ಸಭೆ ಇಂದು ನಡೆಯಲಿದೆ. ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಭಾಗಿಯಾಗ್ತಾರೆ. ಹಾಗೆಯೇ ಸಭೆಯ ಸಮಯ ಇನ್ನೂ ನಿಗದಿಯಾಗಿಲ್ಲ, ಯಾರೂ ಕೂಡಾ ಯಾವುದೇ ವದಂತಿಗೆ ಆಸ್ಪದ ನೀಡದೇ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದ್ರು.