ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಿಗದಿ ಮಾಡಿದ ಬೆನ್ನಲ್ಲೇ ಹಂಗಾಮಿ ಸಭಾಪತಿಗೆ ಹೈಕಮಾಂಡ್ ಬುಲಾವ್ ನೀಡಿದೆ. ವರಿಷ್ಠರ ಸೂಚನೆಯಂತೆ ರಘುನಾಥರಾವ್ ಮಲ್ಕಾಪುರೆ ದೆಹಲಿಗೆ ಪ್ರಯಾಣಿಸಿದ್ದಾರೆ. ಸಭಾಪತಿ ಸ್ಥಾನಕ್ಕಾಗಿ ಹೊರಟ್ಟಿ ಪಟ್ಟು ಹಿಡಿದಿದ್ದಾರೆ. ಈ ಕುರಿತು ಹಂಗಾಮಿ ಸಭಾಪತಿ ಜೊತೆ ಮಹತ್ವದ ಮಾತುಕತೆ ನಡೆಸಿ ಮನವೊಲಿಕೆ ಕಾರ್ಯ ನಡೆಸಲಿದ್ದಾರೆ ಎನ್ನಲಾಗಿದೆ.
ಸಭಾಪತಿ ಚುನಾವಣೆ ನಿಗದಿ: ದೆಹಲಿಗೆ ಬರುವಂತೆ ಕೇಂದ್ರ ನಾಯಕರ ಸೂಚನೆ ಹಿನ್ನೆಲೆಯಲ್ಲಿ ಹಂಗಾಮಿ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.ಇಂದು ರಾತ್ರಿಯೇ ದೆಹಲಿಯಲ್ಲಿ ವರಿಷ್ಠ ನಾಯಕರ ಜೊತೆಗೆ ಮಲ್ಕಾಪುರೆ ಚರ್ಚೆ ನಡೆಸಲಿದ್ದಾರೆ. ನವೆಂಬರ್ 19 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಡಿಸೆಂಬರ್ 21 ಕ್ಕೆ ಸಭಾಪತಿ ಚುನಾವಣೆ ನಿಗದಿ ಮಾಡಲಾಗಿದೆ. ಬಿಜೆಪಿ ನಾಯಕರ ಸೂಚನೆ ಮೇರೆಗೆ ಚುನಾವಣಾ ವೇಳಾಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದು, ಇದಕ್ಕೆ ಮಲ್ಕಾಪುರೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗ್ತಿದೆ.
ಬದಲಾವಣೆಗೆ ನಾಯಕರ ತೀವ್ರ ವಿರೋಧ: ಹಂಗಾಮಿ ಸಭಾಪತಿ ಮಲ್ಕಾಪುರೆ ಬದಲಾವಣೆಗೆ ಕುರುಬ ಸಮುದಾಯದ ನಾಯಕರ ತೀವ್ರ ವಿರೋಧ ವ್ಯಕ್ತವಾಗಿದೆ. ಬಹಿರಂವಾಗಿಯೇ ಮಲ್ಕಾಪುರೆ ಬದಲಾವಣೆ ಮಾಡದಂತೆ ಆಗ್ರಹಿಸಿದ್ದಾರೆ. ಚುನಾವಣೆ ಸನಿಹದಲ್ಲಿ ಯಾವುದೇ ಸಮುದಾಯದ ಅಸಮಾಧಾನ ಕಟ್ಟಿಕೊಳ್ಳಲು ಸಿದ್ಧರಿಲ್ಲದ ಬಿಜೆಪಿ ವರುಷ್ಠರು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಕುರುಬ ಮತ್ತು ಮೂಲ ಬಿಜೆಪಿ ನಾಯಕರ ಬೇಸರವನ್ನೂ ಪರಿಗಣಿಸಿ ಮನವೊಲಿಕೆ ಕಾರ್ಯ ನಡೆಸಲಿದ್ದಾರೆ.
ಮಲ್ಕಾಪುರೆ ಜೊತೆ ವರುಷ್ಠರು ಮಾತುಕತೆ: ಪಕ್ಷನಿಷ್ಠ ರಘುನಾಥ್ ರಾವ್ ಮಲ್ಕಾಪುರೆ ಬದಲಾವಣೆ ಮಾಡುವುದಕ್ಕೆ ಪಕ್ಷ ನಿಷ್ಠ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಮೇಲ್ವರ್ಗದ ಬಸವರಾಜ್ ಹೊರಟ್ಟಿಗೆ ಸಂಪುಟದಲ್ಲಿ ಅವಕಾಶ ಕೊಡಿ. ಸಂವಿಧಾನಬದ್ಧ ಸಭಾಪತಿ ಸ್ಥಾನದಲ್ಲಿ ಮಲ್ಕಾಪುರೆ ಮುಂದುವರಿಸಿ ಎಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಮಲ್ಕಾಪುರೆ ಜೊತೆ ವರಿಷ್ಠರು ಮಾತುಕತೆ ನಡೆಸಲಿದ್ದು, ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಹೊಸ ವಿವಾದ ತಲೆದೋರದಂತೆ ಮಾಡಲು ಮುಂದಾಗಿದ್ದಾರೆ.
ಬಿಜೆಪಿಯಲ್ಲಿ 2 ಬಾರಿ ಪ್ರಧಾನ ಕಾರ್ಯದರ್ಶಿ, ಯುವಮೋರ್ಚಾ ರಾಜ್ಯಾಧ್ಯಕ್ಷ ಆಗಿಯೂ ಕಾರ್ಯನಿರ್ವಹಿಸಿರುವ ಮಲ್ಕಾಪುರೆ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ. ಸದ್ಯ ಹಂಗಾಮಿ ಸಭಾಪತಿಯಾಗಿ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಮತ್ತೊಂದು ಕಡೆ ಮಾತುಕೊಟ್ಟು ಬಸವರಾಜ ಹೊರಟ್ಟಿ ಅವರನ್ನು ಜೆಡಿಎಸ್ ನಿಂದ ಬಿಜೆಪಿಗೆ ಕರೆತರಲಾಗಿದೆ.
ಇದನ್ನೂ ಓದಿ: ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ವಿರೋಧ, ಕೇಶವಕೃಪಾ ಅಂಗಳ ತಲುಪಿದ ವಿವಾದ: ಚುನಾವಣೆ ಮುಂದೂಡಿಕೆ?
ಬಿಜೆಪಿಗೆ ಬರುವ ಕಾರಣದಿಂದಲೇ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಹಂಗಾಮಿಯಾಗಿ ಮಲ್ಕಾಪುರೆ ಅವರನ್ನು ನೇಮಿಸಲಾಗಿದೆ. ಈಗ ಕೊಟ್ಟ ಮಾತಿನಂತೆ ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಿ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರ ಮೇಲಿದೆ. ಹಾಗಾಗಿ ಈ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ್ದು, ಮಲ್ಕಾಪುರೆ ಜೊತೆ ಮಾತುಕತೆ ನಡೆಸಿ ಹೊರಟ್ಟಿ ಹಾದಿ ಸುಗಮ ಮಾಡಿಕೊಡಲಿದೆ ಎನ್ನಲಾಗ್ತಿದೆ.